ಮಂಗಳೂರು, ಏ 09(MSP): ನಗರದಲ್ಲಿ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಮತ್ತೊಂದು ಪ್ರಕರಣವನ್ನು ಸಿಸಿಬಿ ಪೊಲೀಸರು ಪತ್ತೆ ಮಾಡಿದ್ದು, ಮೂವರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಸುನೀಲ್ ಮೆಲ್ವಿನ್ ರೇಗೋ ,ಅಶೋಕ್ ಅಂಚನ್ , ಸಂತೋಷ್ ಜಾನ್ ಎಂದು ಗುರುತಿಸಲಾಗಿದೆ. ಸಿಸಿಬಿ ಪೊಲೀಸರಿಗೆ ದೊರಕಿದ ಪ್ರಮುಖ ಮಾಹಿತಿ ಮೇರೆಗೆ ಈ ದಾಳಿ ನಡೆದಿದ್ದು, ಬಂಧಿತರಿಂದ 4, 20,000 ರೂಪಾಯಿ ನಗದನ್ನು ಹಾಗೂ ಬೆಟ್ಟಿಂಗ್ ದಂಧೆಗೆ ಬಳಸುತ್ತಿದ್ದ 5 ಮೊಬೈಲ್ ಪೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ದಾಳಿ ಸಂದರ್ಭ ಅರುಣ್ ಹಾಗೂ ಕಿರಣ್ ಎನ್ನುವ ಇಬ್ಬರು ಬುಕ್ಕಿ ಗಳು ವಿದೇಶದಲ್ಲಿದ್ದುಕೊಂಡು ಬೆಟ್ಟಿಂಗ್ ದಂಧೆ ನಡೆಸುತ್ತಿರುವ ಬಗ್ಗೆ ತಿಳಿದು ಬಂದಿದ್ದು ಅವರ ವಿರುದ್ದ ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರ ಸಂಖ್ಯೆ ೨೦ಕ್ಕೆ ಏರಿಕೆ: ಐಪಿಎಲ್ ಕ್ರಿಕೆಟ್ ಆರಂಭಗೊಳ್ಳುತ್ತಿದ್ದಂತೆ ಬೆಟ್ಟಿಂಗ್ನಲ್ಲಿ ತೊಡಗದಂತೆ ಪೊಲೀಸ್ ಆಯುಕ್ತರು ಎಚ್ಚರಿಕೆ ನೀಡಿದ್ದರು. ಆದರೂ ಬೆಟ್ಟಿಂಗ್ನಲ್ಲಿ ತೊಡಗಿಸಿಕೊಳ್ಳುತ್ತಿರುವುದು ಕಂಡು ಬರುತ್ತಿದ್ದು, ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುತ್ತಿದ್ದಾರೆ. ಇದು ಕ್ರಿಕೆಟ್ ಬೆಟ್ಟಿಂಗ್ ದಂಧೆ ವಿರುದ್ದ ೬ ನೇ ಪ್ರಕರಣವಾಗಿದೆ.
ಈ ಹಿಂದೆ ಮಾ.26ರಂದು ಮೂವರನ್ನು ಮಂಗಳೂರು ನಗರ ಅಪರಾಧ ಪತ್ತೆದಳ ಪೊಲೀಸರು ಬಿಜೈ ಬಳಿ ಬಂಧಿಸಿ, 62,700 ರೂ. ನಗದು ಹಾಗೂ 4 ಮೊಬೈಲ್ ವಶಪಡಿಸಿಕೊಂಡಿದ್ದರು. ಆ ಬಳಿಕ ಮಾ.29ರಂದು ಪಣಂಬೂರು ಮೀನಕಳಿಯ ಸಮುದ್ರ ಕಿನಾರೆಯಲ್ಲಿ ಮೊಬೈಲ್ ಆ್ಯಪ್ ಮೂಲಕ ಬೆಟ್ಟಿಂಗ್ನಲ್ಲಿ ತೊಡಗಿದ್ದ ಇಬ್ಬರನ್ನು ಮಂಗಳೂರು ನಗರ ಉತ್ತರ ಉಪವಿಭಾಗ ರೌಡಿ ನಿಗ್ರಹದಳ ಪೊಲೀಸರು ಬಂಧಿಸಿ 68 ಸಾವಿರ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದರು. ಮಾ.31ರಂದು ಗೋವಾ ಮೂಲಕ ಆನ್ಲೈನ್ ಬೆಟ್ಟಿಂಗ್ ನಡೆಸುತ್ತಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿ, 3.99 ಲಕ್ಷ ರೂ. ವಶಪಡಿಸಿಕೊಂಡಿದ್ದರು. ಏ.3ರಂದು ಬೆಟ್ಟಿಂಗ್ ನಿರತ ಮೂವರನ್ನು ಕಾವೂರು ಪೊಲೀಸರು ಬಂಧಿಸಿ 26 ಸಾವಿರ ರೂ. ಹಾಗೂ 4 ಮೊಬೈಲ್ ವಶಪಡಿಸಿಕೊಳ್ಳಲಾಗಿತ್ತು. ಏ.4ರಂದು ಮೂಡುಶೆಡ್ಡೆ ಗಾಲ್ಪ್ ಕ್ಲಬ್ ಬಳಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ಮೂವರು ಆರೋಪಿಗಳನ್ನು ಮಂಗಳೂರು ನಗರ ಉತ್ತರ ಉಪವಿಭಾಗ ರೌಡಿ ನಿಗ್ರಹದಳ ಹಾಗೂ ಕಾವೂರು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದರು. ಆರೋಪಿಗಳಿಂದ 26 ಸಾವಿರ ರೂ. ಸಹಿತ 66 ಸಾವಿರ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇದಲ್ಲದೆ ಬಿಜೈ ನ್ಯೂ ರೋಡ್ನ ಅಪಾರ್ಟ್ಮೆಂಟ್ ಮತ್ತು ಬಿಜೈ ವಸತಿಗೃಹವೊಂದರಲ್ಲಿ ನಡೆಯುತ್ತಿದ್ದ ಬೆಟ್ಟಿಂಗ್ ದಂಧೆ ಉರ್ವ ಪೊಲೀಸರು ಪತ್ತೆ ಹಚ್ಚಿ ನಾಲ್ವರನ್ನು ಬಂಧಿಸಿ ನಗದನ್ನು ವಶಪಡಿಸಿಕೊಂಡಿದ್ದರು.