ಬಂಟ್ವಾಳ, ಆ 18 (DaijiworldNews/SM): ತಾಲೂಕಿನ ಪಡಿತರ ಚೀಟಿದಾರರಿಗೆ ವಿತರಣೆಯಾಗಲು ಆಹಾರ ಇಲಾಖೆ ನೀಡಿದ ಅಕ್ಕಿ ದಾಸ್ತಾನಿನಿಂದ ಕೋಟಿಗೂ ಅಧಿಕ ಮೌಲ್ಯದ ಸಾವಿರಾರು ಕ್ವಿಂಟಾಲ್ ಅಕ್ಕಿ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದ್ದು, ಈ ಬಗ್ಗೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.
ಸುಮಾರು 1 ಕೋಟಿ 32 ಲಕ್ಷದ 36 ಸಾವಿರದ 30 ರೂ ಮೌಲ್ಯದ 3892 ಕ್ವಿಂಟಾಲ್ ಅಕ್ಕಿಯ ಕೊರತೆ ಕಂಡು ಬಂದಿದ್ದು, ಇಲ್ಲಿ ಅವ್ಯವಹಾರ ನಡೆದಿದೆ ಎಂದು ಕರ್ನಾಟಕ ಆಹಾರ ಮತ್ತು ಸರಬರಾಜು ನಿಗಮದ ಕಚೇರಿ ವ್ಯವಸ್ಥಾಪಕ ಶರತ್ ಕುಮಾರ್ ಹೊಂಡಾ ಬಂಟ್ವಾಳ ನಗರ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬಂಟ್ಬಾಳ ತಾಲೂಕಿನ ಬಿ.ಸಿ.ರೋಡಿನ ಕೆಎಸ್ಆರ್ಟಿಸಿ ಡಿಪೋದ ಮುಂಭಾಗದಲ್ಲಿರುವ ಗೋದಾಮಿನಲ್ಲಿ ದಾಸ್ತಾನು ಇಡಲಾಗಿದ್ದ ಅಕ್ಕಿಯ ಲೆಕ್ಕಾಚಾರದಲ್ಲಿ ಕೊರತೆ ಕಂಡು ಬಂದ ಹಿನ್ನೆಲೆಯಲ್ಲಿ ತನಿಖೆಗಾಗಿ ಪೊಲೀಸ್ ಇಲಾಖೆಗೆ ದೂರು ನೀಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋದಾಮು ಮೇಲ್ವಿಚಾರಕ ವಿಜಯ್ ಎಂಬಾತನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದು, ವಶಕ್ಕೆ ಪಡೆದಿದ್ದಾರೆ. ಉಳಿದಂತೆ ವಿಜಯ್ ನೀಡಿದ ಮಾಹಿತಿ ಆಧರಿಸಿ ಈ ಪ್ರಕರಣದಲ್ಲಿ ಶಾಮೀಲಾಗಿರುವ ಎಲ್ಲಾ ಆರೋಪಿಗಳನ್ನು ಬಂಧಿಸುವ ಬಗ್ಗೆ ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಜಿಲ್ಲಾಧಿಕಾರಿಗೆ ಬಿಜೆಪಿ ಶಾಸಕ ರಾಜೇಶ್ ನಾಯ್ಕ್ ಪತ್ರ!
ಬಂಟ್ವಾಳ ತಾಲೂಕಿನ ಪಡಿತರ ಚೀಟಿದಾರರಿಗೆ ವಿತರಿಸಲು ಭಾರತೀಯ ಆಹಾರ ನಿಗಮದಿಂದ ವಿತರಣೆಯಾದ ಅಕ್ಕಿ ಅವ್ಯವಹಾರವಾಗಿರುವ ಬಗ್ಗೆ ಸಾರ್ವಜನಿಕ ದೂರುಗಳು ಕೇಳಿ ಬಂದಿದ್ದು, ಕೂಡಲೇ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಶಾಸಕ ರಾಜೇಶ್ ನಾಯ್ಕ್ ಅವರು ಜಿಲ್ಲಾಧಿಕಾರಿ ಅವರಿಗೆ ಪತ್ರ ಬರೆದಿದ್ದಾರೆ.
ಸಂಬಂದಪಟ್ಟ ಬಂಟ್ವಾಳ ತಾಲೂಕಿನ ಪಡಿತರದಾರರಿಗೆ ವಿತರಿಸಲು ಭಾರತೀಯ ಆಹಾರ ನಿಗಮದಿಂದ ಸರಬರಾಜಾದ ಪಡಿತರ ಅಕ್ಕಿಯು ಗೋದಾಮಿನಲ್ಲಿ ದುರುಪಯೋಗ ನಡೆದು ಅವ್ಯವಹಾರ ಆಗುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಗುಮಾನಿ ಇದೆ. ಈ ಕುರಿತು ನನಗೆ ದೂರುಗಳು ಬಂದಿರುತ್ತವೆ. ಆದುದರಿಂದ ತಾವು ತಕ್ಷಣ ಈ ಕುರಿತು ವೈಯಕ್ತಿಕ ಗಮನ ಹರಿಸಿ ಅಕ್ಕಿ ದಾಸ್ತಾನು ಪರಿಶೀಲಿಸಿ ತಪ್ಪಿತಸ್ಥರ ಮೇಲೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ಕೆ.ಎಸ್.ಎಫ್.ಸಿ.ಅಧಿಕಾರಿಗಳಿಂದ ತನಿಖೆಗೆ ಡಿಸಿ ಸೂಚನೆ
ಆಹಾರ ನಿಗಮದಿಂದ ಪಡಿತರ ಚೀಟಿದಾರರಿಗೆ ವಿತರಣೆ ಮಾಡಲು ಕಳುಹಿಸಲಾದ ಅಕ್ಕಿಯಲ್ಲಿ ವ್ಯತ್ಯಾಸ ಕಂಡು ಬಂದಿದೆ ಎಂದು ದೂರು ದಾಖಲಾದ ಹಿನ್ನೆಲೆಯಲ್ಲಿ ಬಿಸಿರೋಡಿನ ತಲಪಾಡಿಯಲ್ಲಿರುವ ದಾಸ್ತಾನು ಕೇಂದ್ರಕ್ಕೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹಾಗೈ ಜಿಲ್ಲಾ ಎಸ್.ಪಿ. ಸಿ.ಬಿ.ರಿಷ್ಯಂತ್ ಬೇಟಿ ನೀಡಿ ಪ್ರಕರಣದ ಕುರಿತು ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದಾರೆ.
ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು ಇಲ್ಲಿನ ಗೊಡೌನ್ ನಲ್ಲಿ ಇರಿಸಲಾದ ಅಕ್ಕಿಯಲ್ಲಿ ವ್ಯತ್ಯಾಸ ಕಂಡು ಬಂದ ಅನುಮಾನದ ಮೇಲೆ ಆಹಾರ ನಿರೀಕ್ಷಕ ತನಿಖೆ ಮಾಡಿದ್ದಾರೆ. ಅ ಸಂದರ್ಭದಲ್ಲಿ ದಾಸ್ತಾನು ಇರುವ ಅಕ್ಕಿಯ ಲೆಕ್ಕಾಚಾರದಲ್ಲಿ ಸ್ವಲ್ಪ ಅನುಮಾನದ ಮೇಲೆ ರೆಕಾರ್ಡ್ ಮಾಡಿದ್ದಾರೆ. ಇದರಲ್ಲಿ ಸೊತ್ತಿನ ಮೊತ್ತ ಸ್ವಲ್ಪ ಜಾಸ್ತಿ ಕಂಡು ಬಂದ ಹಿನ್ನೆಲೆಯಲ್ಲಿ ಕೆ.ಎಸ್.ಎಫ್.ಸಿ. ಯವರ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಕೆ.ಎಸ್.ಎಫ್.ಸಿ. ಮೇಲಾಧಿಕಾರಿಗಳ ಸೂಚನೆಯಂತೆ ನಿಗಮದ ಜಿಲ್ಲಾ ಅಧಿಕಾರಿ ಪೋಲೀಸ್ ಠಾಣೆಗೆ ದೂರನ್ನು ನೀಡಿದ್ದಾರೆ. ದಾಸ್ತಾನು ಕೊಠಡಿಯಲ್ಲಿ ಯಾಕೆ ಈ ತರಹದ ವ್ಯತ್ಯಾಸ ಆಗಿದೆ ಎಂಬುದರ ಮೇಲೆ ಇಲ್ಲಿನ ಗೋಡೌನ್ ಮೇಲ್ವಿಚಾರಕನ ವಿರುದ್ದ ಪ್ರಕರಣ ದಾಖಲು ಮಾಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಈ ಪ್ರಕರಣ ಕಾಣುವ ಹಿನ್ನೆಲೆಯಲ್ಲಿ ಎಸ್.ಪಿ ಜೊತೆ ಸ್ಥಳಕ್ಕೆ ಬೇಟಿ ನೀಡಿದ್ದೇನೆ. ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದೇನೆ. ಯಾವ ರೀತಿಯಲ್ಲಿ ವ್ಯತ್ಯಾಸ ಕಂಡು ಬಂದಿದೆ ಎಂಬುದರ ಬಗ್ಗೆ ಸೂಕ್ತವಾದ ತನಿಖೆ ನಡೆಸಿದ ಬಳಿಕ ಸಂಪೂರ್ಣವಾದ ಚಿತ್ರಣ ಕಂಡು ಬರಬಹುದು. ಬಹಳ ದಿನಗಳ ಸಮಸ್ಯೆಗಳು ಇರಬಹುದು . ಕೆ.ಎಸ್.ಎಫ್.ಸಿ.ಯ ರಾಜ್ಯಮಟ್ಟದಲ್ಲಿ ರುವ ಅಧಿಕಾರಿಗಳನ್ನು ಸ್ಥಳಕ್ಕೆ ಬೇಟಿ ನೀಡಲು ಸೂಚಿಸಿದ್ದೇನೆ. ಅವರು ಬಂದು ನೋಡಿ ವರದಿ ನೀಡುತ್ತಾರೆ ಎಂದವರು ತಿಳಿಸಿದರು.