ಉಡುಪಿ, ಆ 18 (DaijiworldNews/MS): ಉಡುಪಿಯಲ್ಲಿ ಆಳ ಸಮುದ್ರ ಮೀನುಗಾರಿಕೆ ಆರಂಭವಾಗಿ, ಮೀನಿನ ಸುಗ್ಗಿ ಶುರುವಾಗಿದೆ. ಮೀನುಗಾರರು ಬೀಸುವ ಬಲೆಗೆ ಯಥೇಚ್ಛವಾಗಿ ಬೋಂಡಾಸ್ ಮೀನುಗಳು ಬೀಳುತ್ತಿದ್ದು, ಬೊಂಡಾಸ್ನಿಂದ ಮೀನುಗಾರಿಗೆ ಬಂಪರ್ ಹೊಡೆದಿದೆ. ಆದರೆ ಸೂಕ್ತ ಬೆಲೆ ಸಿಗದೇ ಮೀನುಗಾರರು ಇದೀಗ ಸಂಕಷ್ಟಕೆ ಒಳಗಾಗಿದ್ದು ಕೈ ಗೆ ಬಂದ ತುತ್ತು ಬಾಯಿಗೆ ಇಲ್ಲದಂತಾಗಿದೆ .
ಆಳ ಸಮುದ್ರಕ್ಕೆ ತೆರಳಿದ ಬೋಟ್ಗಳು ಆಕ್ಟೊಪ್ಲಸ್ ತಳಿಯ ಬೊಂಡಾಸ್ ಹೊತ್ತು ತರುತ್ತಿದೆ. ಮಲ್ಪೆ ಬಂದರಿನ ಹರಾಜು ಕೇಂದ್ರಗಳಲ್ಲಿ ಬೊಂಡಾಸ್ ರಾಶಿಗಳೇ ಕಾಣಸಿಗುತ್ತದೆ. ಕಳೆದ ಬಾರಿ ಇದೇ ರೀತಿ ಬಂಗುಡೆ ಮೀನಿಗಳು ಸಿಗುತ್ತಿದ್ರೆ, ಈ ಬಾರಿ ಬೊಂಡಾಸ್ ಮೀನುಗಳು ಹೇರಳ ಪ್ರಮಾಣದಲ್ಲಿ ಸಿಗುತ್ತಿದೆ. ಬೊಂಡಾಸ್ ಮೀನು ಇತರೆ ಮೀನುಗಳಿಗಿಂತ ನೋಡಲು ಆಕಾರದಲ್ಲಿ ಭಿನ್ನವಾಗಿದ್ದು, ಆಕ್ಟೊಪಸ್ ರೀತಿ ಹೋಲುತ್ತದೆ. ಸಾಮಾನ್ಯ ದಿನಗಳಲ್ಲಿ ಬೊಂಡಸ್ ಕಿಲೋಗೆ 400 ರಷ್ಟಿದ್ರೆ, ಸದ್ಯ ಬೊಂಡಾಸ್ ರಾಶಿ ರಾಶಿ ಸಿಗುವ ಕಾರಣದಿಂದ 70 ರಿಂದ 90 ರೂಗಳಿಗೆ ಬಿಕರಿಯಾಗುತ್ತಿದೆ. ಬೊಂಡಾಸ್ ಮೀನು ಸುಕ್ಕ ಮಾಡಿ ತಿಂದ್ರೆ ಟೆಸ್ಟ್ ಆಗಿರುತ್ತೆ ಆನ್ನೋದು ಮೀನೂಟ ಪ್ರಿಯರ ಮಾತು.
ಬೊಂಡಾಸ್ ಮೀನಿಗೆ ವಿದೇಶ ದಲ್ಲಿ ಅಪಾರ ಬೇಡಿಕೆ ಇದ್ದು, ಯುರೋಪ್ ದೇಶಗಲ್ಲಿ ಉತ್ತಮ ದರ ಸಿಗುತಿತ್ತು. ಆದರೆ ಕಳೆದ ಕೆಲವು ವರ್ಷಗಳಿಂದ ಯುರೋಪ್ ದೇಶಗಳಿಂದ ಬೇಡಿಕೆ ಕುಸಿತ ಕಂಡಿದ್ದು, ಇದೀಗ ಅಪಾರ ಪ್ರಮಾಣದಲ್ಲಿ ಸಿಕ್ಕಿರುವ ಬೊಂಡಾಸ್ ಮೀನನ್ನು ಸ್ಥಳೀಯ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡಬೇಕಾದ ಸ್ಥಿತಿಯಲ್ಲಿ ಮೀನುಗಾರರು ಇದ್ದಾರೆ.
'ಮೊದಲು ಮೀನು ತಂದ ಮರುದಿನವೇ ಬೋಟುಗಳಿಂದ ಖಾಲಿ ಮಾಡುತ್ತಿದ್ದೆವು. ಆದರೆ ಈಗ ಮಾಲಕರು ರಪ್ತಿಗೆ ಬೇಡಿಕೆ ಇಲ್ಲ ಎಂದು ಹೇಳುತ್ತಿದ್ದಾರೆ. ಇದರಿಂದ ಬೋಟುಗಳಲ್ಲಿರುವ ಮೀನುಗಳನ್ನು ಖಾಲಿ ಮಾಡುವ ಸ್ಥಿತಿಯಲ್ಲಿ ಇಲ್ಲ ಯಾಕೆಂದರೆ ದರ ಇಲ್ಲದೆ ಮೀನು ಹೋಗುತ್ತಿಲ್ಲ. ಈ ಮೀನಿಗೆ ಸ್ವಲ್ಪ ಗಾಳಿ ತಾಗಿದರೂ ಕೀಳಾಗುತ್ತದೆ ಹಾಗಾಗಿ ಬೋಟಿನಲ್ಲಿರುವ ಮೀನನ್ನು ಸ್ವಲ್ಪ ಸ್ವಲ್ಪವೇ ಖಾಲಿ ಮಾಡುತ್ತಿದ್ದೇವೆ' ಎನ್ನುತ್ತಾರೆ ಮೀನುಗಾರರಾದ ಲೋಕನಾಥ್ ಕುಂದರ್.
ಈ ಮೀನು ಗುಜರಾತ್, ಕೇರಳ ಮೂಲಕ ವಿದೇಶಕ್ಕೆ ರಫ್ತು ಆಗುತ್ತದೆ. ಆದರೆ ಈಗ ವಿದೇಶಕ್ಕೆ 20 ಕಂಟೈನರ್ಗಳ ಬದಲು 2 ಕಂಟೈನರ್ಗಳಷ್ಟು ಮೀನುಗಳು ಮಾತ್ರ ರಫ್ತಾಗುತ್ತಿವೆ. ಹೀಗೆ ಇದರ ಬೇಡಿಕೆ ಸಾಕಷ್ಟು ಕುಸಿತ ಆಗಿದೆ. ಬೇರೆ ಮೀನು ಬಂದರೆ ಈ ಮೀನಿಗೆ ಬೇಡಿಕೆ ಹೆಚ್ಚಾಗಿ ದರ ಜಾಸ್ತಿಯಾಗುವ ನಿರೀಕ್ಷೆಯಲ್ಲಿ ಮೀನುಗಾರರು ಇದ್ದಾರೆ.
"ಬೊಂಡಾಸ್ ಮೀನು ಹೇರಳ ಸಂಖ್ಯೆಯಲ್ಲಿ ಬಂದರೂ ಮೀನಿನ ದರ ಕಡಿಮೆ ಆಗಿರುವುದರಿಂದ ಬೋಟಿನವರಿಗೆ ಸಾಕಷ್ಟು ನಷ್ಟವಾಗಿದೆ. ಡಿಸೇಲ್ ದರ ಕೂಡ ಹೆಚ್ಚಾಗಿದೆ. ಈಗ ಬಂದಿರುವ ಮೀನುಗಳನ್ನು ಖಾಲಿ ಮಾಡಬೇಕಾಗಿದೆ. ದುಡಿಯುವವರಿಗೆ ನಷ್ಟ ಆಗಿದೆ. ಫ್ಯಾಕ್ಟರಿಯವರು ಕೂಡ ಈ ಮೀನು ಬೇಡ ಹೇಳುತ್ತಿದ್ದಾರೆ. ಮುಂದೆ ಬೇರೆ ಮೀನು ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದೇವೆ" ಎನ್ನುತ್ತಾರೆ ಮಲ್ಪೆಯ ಮೀನುಗಾರ ಪ್ರಭಾಕರ್ ಕೋಟ್ಯಾನ್.