ಮಂಗಳೂರು, ಆ 16 (DaijiworldNews/SM): ದಕ ಉಡುಪಿ ಜಿಲ್ಲೆಯಲ್ಲಿ ಬಡ ವ್ಯಾಪಾರಿಗಳನ್ನು ಟಾರ್ಗೆಟ್ ಮಾಡಿ ಜಾತ್ರೆ ಸಂತೆಗಳಲ್ಲಿ ಸಮುದಾಯದ ಅಡೆತಡೆಗಳನ್ನು ವಿಧಿಸಲಾಗುತ್ತಿದ್ದು, ಇದರ ವಿರುದ್ಧ ಆಕ್ರೋಶ ಕೇಳಿಬರುತ್ತಿದೆ. ಇಂತಹ ತಾರತಮ್ಯ ನೀತಿ ಅನುಸರಿಸುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯ ಕೇಳಿಬಂದಿದ್ದು, ಮಂಗಳೂರಿನಲ್ಲಿ ದ.ಕ. ಉಡುಪಿ ಜಾತ್ರೆ ವ್ಯಾಪಾರಸ್ಥರ ಸಮಿತಿ ಗೌರವ ಅಧ್ಯಕ್ಷ ಸುನೀಲ್ ಕುಮಾರ್ ಬಜಾಲ್ ಆಗ್ರಹಿಸಿದ್ದಾರೆ.
ಈ ರೀತಿಯ ಕೃತ್ಯದ ಮೂಲಕ ಜನರಲ್ಲಿ ಭಯ ಮೂಡಿಸಿದೆ. ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಇಂತಹ ಕೃತ್ಯ ಹೆಚ್ಚಾಗಿತ್ತು. ಆ ಸಂದರ್ಭ ಇದ್ದ ಸರ್ಕಾರ ಅವರ ಪರವಾಗಿ ನಿಂತಿತ್ತು. ಇಂತಹ ನೀಚ ರಾಜಕೀಯದ ವಿರುದ್ದ ಬಡ ವ್ಯಾಪಾರಸ್ಥರು ಒಂದಾಗಿದ್ದಾರೆ. ಇದರ ಬಗ್ಗೆ ಜಾತ್ರೆ ವ್ಯಾಪಾರಸ್ಥರ ಸಮನ್ವಯ ಸಮಿತಿ ರಚಿಸಿದೆ. ಈ ಬಗ್ಗೆ ಜಿಲ್ಲಾಡಳಿತ ಎಚ್ಚರ ವಹಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಅಲ್ಲದೆ, ಜಿಲ್ಲಾಡಳಿತ ಮುತುವರ್ಜಿ ವಹಿಸಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ. ಹಾಗೂ ಸರಕಾರ ಕೂಡ ಇದಕ್ಕೆ ಸಂಬಂಧಿಸಿದಂತೆ ಸೂಕ್ತ ನಿರ್ಧಾರ ಕೈಗೊಳ್ಳಬೇಕೆಂದು ಆಗ್ರಹಿಸಿದೆ.
ಇಲ್ಲವಾದಲ್ಲಿ ಈ ಬಗ್ಗೆ ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿದ್ರೆ ಹೋರಾಟ ನಡೆಸಲಾಗುತ್ತದೆ. ಸರ್ವೋಚ್ಚ ನ್ಯಾಯಾಲಯವು ಈ ವ್ಯಾಪಾರಕ್ಕೆ ಅವಕಾಶ ನೀಡಿದೆ. ಇದರ ಬಗ್ಗೆ ಸರ್ಕಾರ ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸದೆ ಎಚ್ಚರಿಕಾ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.