ಕಾಸರಗೋಡು, ಆ 17 (DaijiworldNews/HR): ರೈಲು ಹಳಿಯಲ್ಲಿ ಕಲ್ಲು ಹಾಗೂ ಕ್ಲೋಸೆಟ್ ನ ತುಂಡುಗಳನ್ನು ಇರಿಸಿದ ಘಟನೆಯೊಂದು ಕಾಸರಗೋಡಿನ ಕೋಟಿ ಕುಲಂ ನ ಚೆಂಬರಿಕ ಸುರಂಗ ಸಮೀಪ ಇಂದು ಮಧ್ಯಾಹ್ನ ಬೆಳಕಿಗೆ ಬಂದಿದ್ದು, ಭಾರೀ ಅಪಾಯ ತಪ್ಪಿದೆ.
ಕಾಸರಗೋಡಿನಿಂದ ಹೊರಟ ಕೊಯಮುತ್ತೂರು - ಮಂಗಳೂರು ಇಂಟರ್ ಸಿಟಿ ಎಕ್ಸ್ ಪ್ರೆಸ್ ರೈ ಲಿನ ಲೋಕೊ ಪೈಲಟ್ ಇದನ್ನು ಗಮನಿಸಿದ್ದು, ರೈಲು ಹಾದು ಹೋಗುವ ಸಂದರ್ಭದಲ್ಲಿ ಏನೋ ಬಡಿದ ಶಬ್ದ ಕೇಳಿದ್ದು, ಇದರಿಂದ ಕಾಸರಗೋಡು ರೈಲ್ವೆ ಅಧಿಕಾರಿಗೆ ಮಾಹಿತಿ ನೀಡಿದರು. ಬಳಿಕ ರೈಲ್ವೆ ಪೊಲೀಸರು ಹಾಗೂ ರೈಲ್ವೆ ಭದ್ರತಾ ಪಡೆ ಸ್ಥಳಕ್ಕೆ ತಲಪಿ ತಪಾಸಣೆ ನಡೆಸಿದಾಗ ಬಳಿ ಕಲ್ಲು ಹಾಗೂ ತುಂಡಾದ ಕ್ಲೋಸೆಟ್ ಪತ್ತೆಯಾಗಿದೆ.
ಈ ಬಗ್ಗೆ ತನಿಖೆ ಆರಂಭಿಸಲಾಗಿದ್ದು, ಸಮೀಪದ ಸಿಸಿಟಿವಿ ಕ್ಯಾಮಾರ ದೃಶ್ಯಗಳನ್ನು ಕಲೆ ಹಾಕಲಾಗುತ್ತಿದೆ. ಕಣ್ಣೂರು - ಕಾಸರಗೋಡು ನಡುವೆ ಕೆಲ ದಿನಗಳಿಂದ ರೈಲುಗಳ ಮೇಲೆ ಕಲ್ಲೆಸೆದ ಕೆಲವೊಂದು ಘಟನೆಗಳು ನಡೆದಿದ್ದು, ಇದರ ಬಳಿಕ ಇದೀಗ ರೈಲು ಹಳಿಯಲ್ಲಿ ನಡೆದಿರುವ ಇಂತಹ ಕೃತ್ಯ ಗಳು ಸಂಶಯಕ್ಕೆ ಕಾರಣವಾಗಿದೆ.