ಮಂಗಳೂರು, ಆ 17 (DaijiworldNews/MS): ಅನಿವಾಸಿ ಉದ್ಯಮಿ, ಗಾಯಕ, ನಟ ಮತ್ತು ಕೊಡುಗೈ ದಾನಿ ಜೋಸೆಫ್ ಮಥಾಯಸ್ ಕಳೆದ 16 ವರ್ಷಗಳಿಂದ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಅಶೋಕನಗರ ಯುವಕ ಸಂಘ(ರಿ) ಅಶೋಕನಗರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ 2023 ರ ಸಾಲಿನ ಸ್ವಾತಂತ್ರ್ಯ ದಿನಾಚರಣೆ ಮತ್ತು ಫಲಾನುಭವಿಗಳಿಗೆ ವೈದ್ಯಕೀಯ ನೆರವು, ಶಾಲಾ ಮಕ್ಕಳಿಗೆ ಸಮವಸ್ತ್ರ ಮತ್ತು ಹಿರಿಯ ನಾಗರಿಕರಿಗೆ ಸೀರೆ ,ಧೋತಿ ವಿತರಣೆ ನಡೆಸಿದರು.
ಕಳೆದ 16 ವರ್ಷಗಳಿಂದ ಜೋಸೆಫ್ ಮಥಾಯಸ್, ಅಶೋಕನಗರ ಯುವಕ ಸಂಘ(ರಿ) ಇವರು ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಹಮ್ಮಿಕೊಳ್ಳುತ್ತಾ ಬಂದಿರುವ ವೈದ್ಯಕೀಯ ನೆರವು, ಶಾಲಾ ಮಕ್ಕಳಿಗೆ ಸಮವಸ್ತ್ರ ಮತ್ತು ಹಿರಿಯ ನಾಗರಿಕರಿಗೆ ಸೀರೆ ಧೋತಿ ವಿತರಣೆಯ ಜೊತೆಗೆ ಗಾಲಿಕುರ್ಚಿ, ಜೀವನೋಪಾಯಕ್ಕಾಗಿ ಸೈಕಲ್ ಮತ್ತು ಹೊಲಿಗೆ ಯಂತ್ರಗಳನ್ನು ವಿತರಿಸುವ ಯೋಜನೆಯ ಪೋಷಕರಾಗಿದ್ದಾರೆ. ಯೋಜನೆಯ ಆರಂಭದಲ್ಲಿ ಸಾಥ್ ನೀಡಿದ ಹೆನ್ರಿ ಡಿ’ಸೊಜಾರವರು 2018ರಲ್ಲಿ ದೈವಾಧೀನರಾದ ನಂತರ ಯೋಜನೆಯ ಸಂಪೂರ್ಣ ಪ್ರಾಯೋಜಕತ್ವವನ್ನು ಜೋಸೆಫ್ ಮಥಾಯಸ್ ಅವರೇ ವಹಿಸಿಕೊಂಡು ತಮ್ಮ ಮಾತಾಪಿತರಾದ ದಿ| ಮೇರಿ ಮತ್ತು ದಿ| ಲೋರೆನ್ಸ್ ಮಥಾಯಸ್ ಇವರ ಸ್ಮರಣಾರ್ಥ ವಿತರಣೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ
ಇನ್ನುಅಶೋಕನಗರ ಯುವಕ ಸಂಘ(ರಿ) ಭಾರತ ಸರಕಾರದ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರೂ ಯುವಕ ಕೇಂದ್ರ ಮಂಗಳೂರು ಇವರಿಂದ ದಕ್ಷಿಣ ಕನ್ನಡ ಜಿಲ್ಲಾ ಅತ್ಯುತ್ತಮ ಯುವಮಂಡಲ ಪ್ರಶಸ್ತಿಗೆ ಭಾಜನವಾಗಿದೆ.
ಜೋಸೆಫ್ ಮಥಾಯಸ್ ಅವರು ಈ ಯೋಜನೆಯಲ್ಲಿ 16 ವರ್ಷಗಳಿಂದ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಿರುವುದಲ್ಲದೇ, ಪ್ರತೀ ವರ್ಷ ಅಗೋಸ್ತ್ 15 ರಂದು ಕಾರ್ಯಕ್ರಮಕ್ಕಾಗಿಯೇ ದುಬೈಯಿಂದ ಮಂಗಳೂರಿಗೆ ಆಗಮಿಸುತ್ತಾರೆ ಎಂಬ ವಿವರವನ್ನು ಚೇತನ್ ಕುಮಾರ್ ತಮ್ಮ ಕಾರ್ಯಕ್ರಮದ ಪ್ರಾಸ್ತಾವಿಕ ಹಾಗೂ ಸ್ವಾಗತ ಭಾಷಣದಲ್ಲಿ ನೀಡಿದರು
ಕಾರ್ಯಕ್ರಮವನ್ನು ಉದ್ಘಾಟಕ ಲೆಸ್ಲಿ ರೇಗೊ, ಮುಖ್ಯ ಅತಿಥಿ ಎ. ದಾಮೋದರ, ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜೋಸೆಫ್ ಮಥಾಯಸ್ ಜೊತೆಗೆ ಸಂಘದ ಗೌರವಾಧ್ಯಕ್ಷ ಜೋಸೆಫ್ ಲೋಬೊ ಮತ್ತು ಅಧ್ಯಕ್ಷರಾದ ಜಯರಾಮ್ ದೀಪ ಪ್ರಜ್ವಲಿಸುವುದರ ಜೊತೆಗೆ ವಿದ್ಯುಕ್ತವಾಗಿ ಉದ್ಘಾಟಿಸಿದರು.ಬಳಿಕ 5 ಮಂದಿ ಫಲಾನುಭವಿಗಳಿಗೆ ವೈದ್ಯಕೀಯ ನೆರವು, ಸುಮಾರು 20 ಮಂದಿ ಹಿರಿಯ ನಾಗರಿಕರಿಗೆ ಸೀರೆ ಧೋತಿ ಮತ್ತು ಬಾಲವಾಡಿಯಿಂದ ಏಳನೇ ತರಗತಿಯ ವಿದ್ಯಾರ್ಥಿಗಳಿಗೆ ಸಮವಸ್ತ್ರವನ್ನು ವಿತರಿಸಲಾಯಿತು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಉದ್ಯಮಿ, ನಿರೂಪಕ ಮತ್ತು ಸಮಾಜ ಸೇವಕ ಲೆಸ್ಲಿ ರೇಗೊ ಜೋಸೆಫ್ ಮಥಾಯಸ್ ಪರಿವಾರಕ್ಕೆ ಅಭಿನಂದನೆ ಸಲ್ಲಿಸಿದರು.
ವೇದಿಕೆಯಲ್ಲಿ ಸಂಘದ ಗೌರವಾಧ್ಯಕ್ಷ ಜೋಸೆಫ್ ಲೋಬೊ, ಅಧ್ಯಕ್ಷ ಜಯರಾಮ್ ಉಪಸ್ಥಿತರಿದ್ದು, ಉಪಾಧ್ಯಕ್ಷರುಗಳಾದ ಪ್ರಭಾಕರ್ ಎಸ್. ಮತ್ತು ನಿರಂಜನ್, ಪ್ರಧಾನ ಕಾರ್ಯದರ್ಶಿ ಶ್ರೀ ಬಿ. ವಸಂತ ಕುಮಾರ್, ಜತೆ ಕಾರ್ಯದರ್ಶಿಗಳಾದ ಬಾಲಕೃಷ್ಣ ದೇವಾಡಿಗ, ಕೆ. ವಸಂತ ಕುಮಾರ್, ಕೋಶಾಧಿಕಾರಿ ನವೀನ್ ಕುಮಾರ್, ಕ್ರೀಡಾ ಕಾರ್ಯದರ್ಶಿ ಪ್ರಶಾಂತ್ ಆರ್, ಜೊತೆ ಕ್ರೀಡಾ ಕಾರ್ಯದರ್ಶಿ ದಯಾನಂದ ಶೆಟ್ಟಿ, ಸಮಿತಿ ಸದಸ್ಯರುಗಳಾದ ರಿತೇಶ್ ಕುಮಾರ್, ತಿನ್ ಮಾಡ, ಶ್ರೀನಿವಾಸ ಕರ್ಕೇರ, ಶೀ ದಾಮೋದರ ಶೆಟ್ಟಿ ಹಾಜರಿದ್ದರು.