ಮಂಗಳೂರು,ಆ 17 (DaijiworldNews/MS): ನಿಗಧಿತ ಔಷಧಿಯ ಜೊತೆಗೆ ಪೌಷ್ಠಿಕ ಆಹಾರಗಳ ಸೇವನೆಯಿಂದ ಕ್ಷಯ ರೋಗವನ್ನು ಆದಷ್ಟು ಬೇಗ ನಿರ್ಮೂಲನೆ ಮಾಡಬಹುದಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್ ಕುಮಾರ್ ಅಭಿಪ್ರಾಯಪಟ್ಟರು.
ಅವರು ಆ.14ರಂದು ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕೆಐಒಸಿಎಲ್ ವತಿಯಿಂದ ನಿ-ಕ್ಷಯ್ ಮಿತ್ರದಡಿ ಜಿಲ್ಲೆಯ ಒಟ್ಟು 535 ಕ್ಷಯರೋಗಿಗಳಿಗೆ ಪೌಷ್ಠಿಕ ಆಹಾರ ಪೊಟ್ಟಣ ವಿತರಿಸಿ ಮಾತನಾಡಿದರು.
ಕೇಂದ್ರ ಸರ್ಕಾರವು 2025ಕ್ಕೆ ಕ್ಷಯ ಮುಕ್ತ ಭಾರತವನ್ನು ಮಾಡುವ ಗುರಿ ಹೊಂದಿದೆ. ನಿಗದಿತ ಔಷಧಿಯ ಜೊತೆಗೆ ಪೌಷ್ಠಿಕ ಆಹಾರ ಸೇವನೆ ಮಾಡಿದಲ್ಲಿ ಕ್ಷಯದಿಂದ ಬಹುಬೇಗ ಗುಣ ಹೊಂದಬಹುದಾಗಿದೆ. ಈ ಕಾರ್ಯಕ್ರಮಕ್ಕೆ ನಿ-ಕ್ಷಯ್ ಮಿತ್ರ ಸಹಕಾರಿಯಾಗಿದೆ. ‘ನಿ-ಕ್ಷಯ್ ಮಿತ್ರ' ಎಂದರೆ ಕ್ಷಯರೋಗವನ್ನು ಕೊನೆಗಾಣಿಸಲು ಮಾಡುವ ಜೊತೆಗಾರ ಎಂದಾರ್ಥ ಎಂದ ಅವರು ಈ ಯೋಜನೆಯಲ್ಲಿ ಕ್ಷಯರೋಗಿಗೆ ಕನಿಷ್ಠ 6 ತಿಂಗಳಿನಿಂದ ಮೂರು ವರ್ಷದವರೆಗೆ ಪೌಷ್ಠಿಕ ಆಹಾರ ವಿತರಣೆ, ರೋಗ ನಿರ್ಣಯಕ್ಕೆ ಸಹಾಯ ಮಾಡುವುದು, ಉದ್ಯೋಗ ಕೊಡಿಸುವುದಾಗಿದ್ದು, ಪೌಷ್ಠಿಕ ಆಹಾರ ವಿತರಣೆ ಕಡ್ಡಾಯವಾಗಿರುತ್ತದೆ. ಖಾಸಗಿ ಸಂಸ್ಥೆಯವರು, ಕೈಗಾರಿಕೋದ್ಯಮಿಗಳು, ರಾಜಕಾರಣಿಗಳು, ಸೇವಾ ಸಂಸ್ಥೆಯವರು ಹಾಗೂ ಇನ್ನಿತರರು ವೈಯುಕ್ತಿಕವಾಗಿಯೂ ಈ ಯೋಜನೆಗೆ ಕೈ ಜೋಡಿಸಬಹುದಾಗಿದೆ, ಇದರಿಂದ ಅವರಿಗೆ ಆದಾಯ ತೆರಿಗೆ ವಿನಾಯಿತಿ ಮತ್ತು ಕೇಂದ್ರ ಸರ್ಕಾರದಿಂದ ಪ್ರಮಾಣ ಪತ್ರ ನೀಡಲಾಗುವುದು ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಕೆ. ಮಾತನಾಡಿ, ಕ್ಷಯರೋಗ ನಿವಾರಣೆಗೊಳಿಸುವ ಜವಾಬ್ದಾರಿ ಬರೀ ಆರೋಗ್ಯ ಇಲಾಖೆಯದ್ದಷ್ಟೇ ಅಲ್ಲ, ಇದರಲ್ಲಿ ಸಾರ್ವಜನಿಕರು ಮತ್ತು ಸ್ವಯಂ ಸೇವಾ ಸಂಸ್ಥೆಗಳ ಜವಾಬ್ದಾರಿಯೂ ಇದೆ, ಕಾರ್ಯಕ್ರಮಕ್ಕೆ ಕೈ ಜೋಡಿಸಿದ ಕೆಐಒಸಿಎಲ್ ಸಂಸ್ಥೆಗೆ ಸರ್ಕಾರದ ವತಿಯಿಂದ ಧನ್ಯವಾದ ತಿಳಿಸಿದರು.
ಕೆಐಒಸಿಎಲ್ ಸಂಸ್ಥೆಯ ಅಧ್ಯಕ್ಷ ಟಿ. ಸಾಮಿನಾಥನ್ ಮಾತನಾಡಿ, ಈ ರೀತಿಯ ಸೇವೆಗಳಿಗೆ ನಮ್ಮ ಸಂಸ್ಥೆಯು ಸದಾ ಮುಂದಿದ್ದು, ಈ ಹಿಂದೆಯೂ ಸಹ ಕೋವಿಡ್ ಸಮಯದಲ್ಲಿ ಆಕ್ಸಿಜನ್ ಪ್ಲಾಂಟ್ ಒದಗಿಸಿದೆ ಹಾಗೂ ವೆನ್ಲಾಕ್ ಆಸ್ಪತ್ರೆಗೆ ಮೆಡಿಕಲ್ ಉಪಕರಣಗಳನ್ನು ನೀಡಿದೆ. ಪೌಷ್ಠಿಕ ಆಹಾರದ ವಿತರಣೆಯಿಂದ ಕ್ಷಯ ಮುಕ್ತ ಸಮಾಜ ಮಾಡಲು ಸಹಕಾರಿಯಾಗಬಹುದೆಂದು ತಿಳಿಸಿದರು.
ಕೆಐಒಸಿಎಲ್ ನಿರ್ದೇಶಕರು, ಸಿಆರ್ ಎಸ್ ಸದಸ್ಯರುಗಳು, ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಭಾಗವಹಿಸಿದ್ದರು.
ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ. ಬದರುದ್ದೀನ್ ಎಂ.ಎನ್. ವಂದಿಸಿದರು.