ಮಂಗಳೂರು, ಎ09(SS): ಗತ ಕಾಲದ ಇತಿಹಾಸವನ್ನು ಸಾರುವ ಪ್ರಸಿದ್ಧ ವಾಮಂಜೂರು ಶ್ರೀ ಅಮೃತೇಶ್ವರ ದೇವಸ್ಥಾನಕ್ಕೆ ಭಕ್ತರು ಚಂದ್ರಮಂಡಲ ರಥವನ್ನು ಸಮರ್ಪಿಸಿದ್ದಾರೆ.
ಮೂಡಬಿದಿರೆ ಅಶ್ವತ್ಥಪುರದ ಪುತ್ತಿಗೆಯಿಂದ ದೇವಸ್ಥಾನಕ್ಕೆ ಭವ್ಯ ಮೆರವಣಿಗೆಯಲ್ಲಿ ಈ ನೂತನ ರಥವನ್ನು ತರಲಾಗಿದೆ. ಬಳಿಕ ವಿಧಿ - ವಿಧಾನದಂತೆ ಚಂದ್ರಮಂಡಲ ರಥವನ್ನು ದೇವಾಲಯಕ್ಕೆ ಸಮರ್ಪಿಸಿದ್ದಾರೆ.
ನೂರಾರು ವರುಷಗಳ ಹಿಂದಿನ ದೇವಾಲಯ ಇದಾಗಿದ್ದು, ಅಸಂಖ್ಯಾತ ಭಕ್ತ ಜನ ವಾಮಂಜೂರು ಶ್ರೀ ಅಮೃತೇಶ್ವರ ದೇವಸ್ಥಾನಕ್ಕೆ ಶ್ರೀ ಸ್ವಾಮಿಯ ದರುಶನ ಪಡೆಯಲು ಆಗಮಿಸುತ್ತಾರೆ. ಅತ್ಯಂತ ಕಾರಣೀಕ ಕ್ಷೇತ್ರ ಇದಾಗಿದ್ದು, ದೇವಾಲಯದಲ್ಲಿ ನೆಲೆ ನಿಂತಿರುವ ಅಮೃತೇಶ್ವರ ಬೇಡಿದ ವರವನ್ನು ನೀಡುವ ಮಹಾಶಕ್ತಿಯಾಗಿದೆ. ವಾಮಂಜೂರಿನ ಪುಟ್ಟ ಪೇಟೆಯ ಸೆರಗಿನಲ್ಲಿ ಕಂಗೊಳಿಸುವ ಈ ದೇವಾಲಯದಲ್ಲಿ ಇದೇ ತಿಂಗಳಿನಲ್ಲಿ 9 ದಿನಗಳ ವಾರ್ಷಿಕ ಜಾತ್ರೆ ನಡೆಯಲಿದೆ.
ಮರದ ಶಿಲ್ಪಿ ಹರೀಶ್ ಆಚಾರ್ಯ ಸಂಪಿಗೆಯವರ ಕಾರ್ಯಾಗಾರದಲ್ಲಿ ವಿಶಿಷ್ಠ ಕಲಾಕೃತಿ ಹಾಗೂ ಸ್ಟಿಯರಿಂಗಿನೊಂದಿಗೆ ನಿರ್ಮಿಸಲಾಗಿದ್ದು, ಇದಕ್ಕೆ ಸುಮಾರು 30 ಲಕ್ಷ ರೂ. ವೆಚ್ಚ ತಗುಲಿದೆ. ಈ ಚಂದ್ರಮಂಡಲ ರಥ ಎ. 12ರಂದು ಶ್ರೀ ಅಮೃತೇಶ್ವರ ದೇವರಿಗೆ ಸಮರ್ಪಣೆಯಾಗಲಿದೆ.