ಉಳ್ಳಾಲ, ಆ 16 (DaijiworldNews/MS): ಮಧುಮೇಹ ಕಾಯಿಲೆಗೆ ಬಳಸುವ ಮಾತ್ರೆ ರಬ್ಬರ್ ರೂಪದಲ್ಲಿ ಕಂಡುಬಂದಿದ್ದು, ಇದೊಂದು ನಕಲಿ ಮಾತ್ರೆ ಎಂದು ಉಳ್ಳಾಲ ತಾಲೂಕಿನ ಕೋಟೆಕಾರು ನಿವಾಸಿ ಮನೆಮಂದಿ ಆರೋಪಿಸಿದ್ದಾರೆ.
ಕೋಟೆಕಾರು ನಿವಾಸಿ ರಾಮಗೋಪಾಲ್ ಆಚಾರ್ಯ ಎಂಬವರು ಪತ್ನಿ ಮೀನಾ ಕುಮಾರಿ ಎಂಬವರಿಗೆ ನಿತ್ಯ ಪಡೆದುಕೊಳ್ಳುವ ಮೆಡಿಕಲ್ ಶಾಪ್ ನಿಂದ ಮಧುಮೇಹ ಕಾಯಿಲೆಗೆ ಮಾತ್ರೆಗಳನ್ನು ಖರೀದಿಸಿದ್ದಾರೆ. ಸುದ್ಧಿ ಮಾಧ್ಯಮವೊಂದರಲ್ಲಿ ʻ ಶುಗರ್ ಮಾತ್ರೆ ಪ್ಲಾಸ್ಟಿಕ್ ಎಂಬ ಸುದ್ಧಿಯನ್ನು ಗಮನಿಸಿದ್ದ ರಾಮಗೋಪಾಲ್ ಅವರು ತಾನು ತಂದಿದ್ದ ಮಾತ್ರೆಗಳನ್ನು ಅಸಲಿಯೋ ನಕಲಿಯೋ ಅನ್ನುವುದನ್ನು ಪರಿಶೀಲಿಸಲು ಮುಂದಾಗಿದ್ದರು. ಅದರಂತೆ ಐಸ್ರಿಲ್ ಎಂ-22 ಎಂಜಿ ಮತ್ತು 500 ಎಂ.ಜಿ ಮಾತ್ರೆಗಳನ್ನು ಸಾರಿಡಾನ್, ಕ್ಯಾಲ್ಷಿಯಂ ಮಾತ್ರೆಗಳ ಜೊತೆಗೆ ನೀರಿನಲ್ಲಿ ಹಾಕಿದ್ದಾರೆ. ಬೆಳಿಗ್ಗೆ ಗಮನಿಸಿದಾಗ ಕ್ಯಾಲ್ಷಿಯಂ ಮತ್ತು ಸ್ಯಾರಿಡಾನ್ ಮಾತ್ರೆ ಸಂಪೂರ್ಣ ಕರಗಿ ಹೋಗಿದ್ದರೆ, ಮಧುಮೇಹ ಕಾಯಿಲೆಗೆ ತೆಗೆದುಕೊಳ್ಳುವ ಐಸ್ರಿಲ್ ಮಾತ್ರೆ ಮಾತ್ರ ಇದ್ದ ಮಾತ್ರೆಗಿಂತ ಐದು ಬಾರಿ ಉಬ್ಬಿ ರಬ್ಬರ್ ತರಹ ಕಂಡುಬಂದಿದೆ.
ಇದರಿಂದ ಗಾಬರಿಗೊಂಡ ರಾಮಗೋಪಾಲ್ ಅವರು ಮೆಡಿಕಲ್ ಅಂಗಡಿ ಮಾಲೀಕರಿಗೆ ಕರೆ ಮಾಡಿದ್ದಾರೆ. ಅವರು ತಾವು ಮಾತ್ರೆಗಳನ್ನು ಸಂಬಂಧಪಟ್ಟ ಕಂಪೆನಿ ಅಧಿಕೃತರಿಂದಲೇ ತರಿಸಿಕೊಳ್ಳುತ್ತಿದ್ದೇವೆ, ಸಂಶಯಗಳಿದ್ದಲ್ಲಿ ಮಾತ್ರೆ ಮೇಲಿರುವ ಗ್ರಾಹಕ ಸೇವಾ ಕೇಂದ್ರವನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ.