ಪುತ್ತೂರು, ಆ 16 (DaijiworldNews/AK): ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಬಾಲಕನನ್ನು ಚಿಕಿತ್ಸೆಗಾಗಿ ಇಲ್ಲಿನ ಖಾಸಗಿ ಆಸ್ಪತ್ರೆಗೆ ಕರೆತರಲಾಗಿದ್ದು, ಆತನಿಗೆ ಶಸ್ತ್ರಚಿಕಿತ್ಸೆ ಕೂಡ ಮಾಡಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಆಸ್ಪತ್ರೆಯಲ್ಲಿ ನೀಡಿದ ಚಿಕಿತ್ಸೆಗೆ ಸ್ಪಂದಿಸದ ಕಾರಣ ಮಾರ್ಗಮಧ್ಯೆ ಬಾಲಕ ಕೊನೆಯುಸಿರೆಳೆದಿದ್ದಾನೆ.
ಮೃತರನ್ನು ಸುಳ್ಯದ ಕಸಬಾ ಗ್ರಾಮದ ಶ್ರೀಜಿತ್ (17) ಎಂದು ಗುರುತಿಸಲಾಗಿದೆ. ಆ.14ರಂದು ನಡೆದ ಬಾಲಕನ ಸಾವಿಗೆ ಸಂಬಂಧಿಸಿದಂತೆ ಪುತ್ತೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆಗಸ್ಟ್ 12ರಂದು ರಾತ್ರಿ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶ್ರೀಜಿತ್ ಅವರನ್ನು ಹಳೆ ತಾಲೂಕು ಕಚೇರಿ ಬಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಡ್ಯೂಟಿ ಡಾಕ್ಟರ್ ಅವರನ್ನು ಪರೀಕ್ಷಿಸಿ ಒಳರೋಗಿಯಾಗಿ ದಾಖಲಿಸಿಕೊಂಡರು. ಆಗಸ್ಟ್ 13 ರಂದು ಬೆಳಗ್ಗೆ ಶ್ರೀಜಿತ್ ನನ್ನು ಪರೀಕ್ಷಿಸಿದ ವೈದ್ಯರು ಶಸ್ತ್ರಚಿಕಿತ್ಸೆ ಮಾಡುವಂತೆ ಸೂಚಿಸಿದ್ದರು. ಶ್ರೀಜಿತ್ ಅವರನ್ನು ಸಂಜೆ 6 ಗಂಟೆಗೆ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಯಿತು ಮತ್ತು ನಂತರ ಐಸಿಯುಗೆ ಮತ್ತು ನಂತರ ವಾರ್ಡ್ಗೆ ಸ್ಥಳಾಂತರಿಸಲಾಯಿತು, ಬಾಲಕನ್ನು ಶಿಫ್ಟ್ ಮಾಡಿ ಶಸ್ತ್ರಚಿಕಿತ್ಸೆ ಮಾಡಿದ ವಿಚಾರ ಶ್ರೀಜಿತ್ ಅವರ ಕುಟುಂಬಕ್ಕೆ ತಿಳಿಸಿದರು.
ಆಗಸ್ಟ್ 14 ರಂದು ಬೆಳಿಗ್ಗೆ 9 ಗಂಟೆಗೆ, ಆಸ್ಪತ್ರೆಯಲ್ಲಿ ಬಾಲಕನಿಗೆ ಶುಶ್ರೂಷೆ ಮಾಡಲು ಸರಿಯಾದ ಉಪಕರಣಗಳಿಲ್ಲ ಎಂದು ವೈದ್ಯರು ಹೇಳಿದರು. ಶ್ರೀಜಿತ್ನನ್ನು ಮಂಗಳೂರಿಗೆ ಕರೆದುಕೊಂಡು ಹೋಗುವಂತೆ ತಿಳಿಸಲಾಗಿತ್ತು. ಶ್ರೀಜಿತ್ ಅವರ ಕುಟುಂಬಸ್ಥರು ಆಂಬ್ಯುಲೆನ್ಸ್ನಲ್ಲಿ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ವೈದ್ಯರು ಪರೀಕ್ಷಿಸಿ ಮೃತಪಟ್ಟಿದ್ದಾರೆ ಎಂದು ಶ್ರೀಜಿತ್ ಅವರ ಚಿಕ್ಕಪ್ಪ ಕೃಷ್ಣ ಅವರು ಪುತ್ತೂರು ನಗರ ಪೊಲೀಸರಿಗೆ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿದ್ದಾರೆ.
ಇದೇ ವೇಳೆ ಪುತ್ತೂರಿನ ಖಾಸಗಿ ಆಸ್ಪತ್ರೆಯ ನಿರ್ಲಕ್ಷ್ಯವೇ ಬಾಲಕನ ಸಾವಿಗೆ ಕಾರಣ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ ಸದಸ್ಯರು ಪುತ್ತೂರಿನ ಖಾಸಗಿ ಆಸ್ಪತ್ರೆ ಎದುರು ಧರಣಿ ನಡೆಸಿದರು.
ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಜಿ.ಶಿವಶಂಕರ್ ಪ್ರತಿಭಟನಾಕಾರರನ್ನು ಭೇಟಿ ಮಾಡಿ ಮನವಿ ಪತ್ರ ಸ್ವೀಕರಿಸಿದರಲ್ಲದೇ ಧರಣಿನಿರತರನ್ನು ಮನ ವೊಲಿಸಿದರು. ನಂತರ ಪ್ರತಿಭಟನಾಕಾರರು ಪ್ರತಿಭಟನೆಯನ್ನ ಹಿಂಪಡೆದರು.