ಕುಂದಾಪುರ, ಆ 15 (DaijiworldNews/MS): ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆಯಾಗಿ ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕರಿಲ್ಲದಿದ್ದರೂ ಇರುವ ಐದೂ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಆರ್. ಹೆಬ್ಬಾಳ್ಕರ್ ಹೇಳಿದರು.
ಮಂಗಳವಾರ ಹಾರ್ದಳ್ಳಿ ಮಂಡಳ್ಳಿ ಗ್ರಾಮಪಂಚಾಯತ್ ನ ನೂತನ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು. ರಾಜಕೀಯವೇ ಬೇರೆ ಅಭಿವೃದ್ಧಿಯೇ ಬೇರೆ ಎಂದ ಸಚಿವೆ ಲಕ್ಷ್ಮೀ, ನಾನು ಕೇವಲ ಮಾತಿನಲ್ಲಿ ಅಲ್ಲ ಪ್ರಾಯೋಗಿಕವಾಗಿ ಅದನ್ನು ಅನುಷ್ಟಾನ ಗೊಳಿಸುವೆ ಎಂದರು.
ಇದೇ ಸಂದರ್ಭ ಸಚಿವೆ ಲಕ್ಷ್ಮೀ ಹೆಬ್ವಾಳ್ಕರ್ ಅವರನ್ನು ಸನ್ಮಾನಿಸಲಾಯಿತು.
ಶಾಸಕ ಕಿರಣ್ ಕುಮಾರ್ ಎ ಕೊಡ್ಗಿ, ಅಧ್ಯಕ್ಷತೆ ವಹಿಸಿದ್ದರು. ಎಂ.ಎಲ್.ಸಿ. ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಉಪಾಯುಕ್ತೆ ರಶ್ಮಿ ಎಸ್.ಆರ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್., ತಹಸೀಲ್ದಾರ್ ಶೋಭಾಲಕ್ಷ್ಮಿ, ಗ್ರಾಮಪಂಚಾಯತ್ ಅಧ್ಯಕ್ಷ ಜಗನ್ನಾಥ ಶೆಟ್ಟಿ, ಎಸ್ಪಿ ಅಕ್ಷಯ್ ಎಂ.ಹಾಕೆ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಭಾರತಿ ಮೊದಲಾದವರು ಉಪಸ್ಥಿತರಿದ್ದರು.