ಉಡುಪಿ, ಎ09(SS): ಮೀನುಗಾರರ ಹಿತಕ್ಕಾಗಿ ದುಡಿದು, ಅವರ ಎಲ್ಲಾ ಸಂಕಷ್ಟಕ್ಕೆ ಸ್ಪಂದಿಸುತ್ತೇನೆ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಮೀನುಗಾರರು ಮೃತಪಟ್ಟರೆ ಕೇಂದ್ರ ಸರಕಾರ 2 ಲಕ್ಷ ನೀಡುತ್ತಿದ್ದು, ಅದನ್ನು ಹೆಚ್ಚಿಸಲು ಪ್ರಯತ್ನಿಸುತ್ತೇನೆ. ರಾಜ್ಯ ಸರಕಾರದ ಮುಖ್ಯಮಂತ್ರಿ ಈಗಾಗಲೇ ಕೃಷಿಕರಿಗೆ ಸಾಲ ಮನ್ನಾ ಮಾಡಿದಂತೆ ಮೀನುಗಾರ ಮಹಿಳೆಯರ ಸಾಲ ಮನ್ನಾ ಮಾಡಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ.
ನನ್ನನ್ನು ಸಂಸತ್ಗೆ ಕಳುಹಿಸಿಕೊಟ್ಟರೆ ಕರಾವಳಿ ಮೀನುಗಾರರಿಗೆ ಹೊಸ ಯೋಜನೆಗಳನ್ನು ರೂಪಿಸಿ ಪ್ರಚಲಿತ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತಂದು ಕೇಂದ್ರ ಸರಕಾರದಿಂದ ಹೆಚ್ಚಿನ ಸಬ್ಸಿಡಿಯಲ್ಲಿ ನಾಡದೋಣಿ ಮೀನುಗಾರರಿಗೆ ಸೀಮೆ ಎಣ್ಣೆ ಸಿಗುವಂತೆ ಮಾಡುತ್ತೇನೆ. ಬಂದರುಗಳ ಅಭಿವೃದ್ಧಿಗೆ ಗರಿಷ್ಠ ಅನುದಾನವನ್ನು ತಂದು ಬಂದರು ಅಭಿವೃದ್ಧಿಗೆ ಪ್ರಯತ್ನಿಸುತ್ತೇನೆ ಎಂದು ಹೇಳಿದ್ದಾರೆ.
ಮೀನುಗಾರಿಕೆಗೆ ಕೇಂದ್ರ ಮತ್ತು ರಾಜ್ಯ ಸರಕಾರದ ನೆರವಿನಿಂದ ಮೀನುಗಾರರ ಗರಿಷ್ಠ ಅಭಿವೃದ್ಧಿಗೆ ಪ್ರಯತ್ನ ಮಾಡುತ್ತೇನೆ. ರಾಜ್ಯ ಮತ್ತು ಕೇಂದ್ರ ಸರಕಾರ ಪ್ರತಿ ದಿನ ಡೀಸೆಲ್ ಮತ್ತು ಸೀಮೆ ಎಣ್ಣೆ ಸಬ್ಸಿಡಿ 300 ಲೀ.ನೀಡುತ್ತಿದ್ದು, ಅದನ್ನು 500 ಲೀ.ಗೆ ಏರಿಸಲು ಯತ್ನಿಸುತ್ತೇನೆ. ನನ್ನನ್ನು ಲೋಕಸಭೆಗೆ ಆರಿಸಿ ಕಳುಹಿಸಿ ಎಂದು ಮನವಿ ಮಾಡಿದ್ದಾರೆ.