ಕಟಪಾಡಿ, ಏ 08(AZM) :ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ಚುನಾವಣಾ ಆಯೋಗದ ಪೂರ್ವಾನುಮತಿಯಿಲ್ಲದೆ ಮೈಕ್ ಬಳಸಿದ ಮುಸ್ಲಿಂ ಒಕ್ಕೂಟದ ಮುಖಂಡ ಇಕ್ಬಾಲ್ ಸಂಶುದ್ದೀನ್ ಮತ್ತು ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಅವರ ವಿರುದ್ಧ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರವಿವಾರ ಸಂಜೆ ಕಟಪಾಡಿ ಅಚ್ವಡದಲ್ಲಿರುವ ಇಕ್ಬಾಲ್ ಸಂಶುದ್ದೀನ್ ಅವರ ಮನೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರು ಪಕ್ಷದ ಅಭ್ಯರ್ಥಿಯ ಪರವಾಗಿ ಚುನಾವಣಾ ಪ್ರಚಾರ ಸಭೆ ನಡೆಸಿದ್ದರು.
ಆದರೆ ಈ ಸಭೆಗೆ ಚುನಾವಣಾ ಆಯೋಗದ ಪೂರ್ವಾನುಮತಿಯನ್ನು ಪಡೆಯದೇ ಮೈಕ್ ನ್ನು ಬಳಸಲಾಗಿತ್ತು. ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಕಾಪು ಕ್ಷೇತ್ರ ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್ ನ ಅಧಿಕಾರಿ ನಾಗರಾಜ್ ಆರೋಪಿಸಿದ್ದಾರೆ ಹಾಗೂ ನೀತಿ ಸಂಹಿತೆ ಉಲ್ಲಂಘನೆಯಡಿ ದೂರು ನೀಡಿದ್ದಾರೆ.
ದೂರಿನನ್ವಯ ಕಾಪು ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರೆಸಿದ್ದಾರೆ.