ಮಂಗಳೂರು, ಆ 14(DaijiworldNews/MS): ಡಿಸಿ ಕಚೇರಿ ಮುಂಭಾಗದಲ್ಲಿ ದಕ್ಷಿಣ ಕನ್ನಡ ಬಿಜೆಪಿ ಶಾಸಕರು ನಡೆಸುತ್ತಿದ್ದ ಅಹೋರಾತ್ರಿ ಧರಣಿಯನ್ನು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರ ಭರವಸೆಯ ನಂತರ ಕೈಬಿಡಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರ ರಾಜ್ಯದಲ್ಲಿ ದ್ವೇಷದ ರಾಜಕಾರಣ ಮಾಡಲಾಗುತ್ತಿದ್ದು , ಜಿಲ್ಲೆಯಲ್ಲಿ ಶಾಸಕರ ಹಕ್ಕುಚ್ಯುತಿ ಮಾಡುವಂತಹ ಕೆಲಸ ನಡೆಯುತ್ತಿದೆ. ಒಂದು ಪಕ್ಷದ ಕೆಲ ನಾಯಕರ ಮಾತು ಕೇಳಿ ಚ್ಯುತಿ ಮಾಡಲಾಗುತ್ತಿದೆ.
ಮೂಡುಬಿದಿರೆ ಕ್ಷೇತ್ರದ ಇರುವೈಲು ಗ್ರಾಮ ಪಂಚಾಯತ್ ಹಾಗೂ ಬಂಟ್ವಾಳ ಕ್ಷೇತ್ರದ ಇರ್ವತ್ತೂರು ಗ್ರಾಮ ಪಂಚಾಯತ್ ನ ಉದ್ಘಾಟನಾ ಕಾರ್ಯಕ್ರಮವನ್ನು ಶಿಷ್ಟಾಚಾರ ನೆಪದಲ್ಲಿ ರದ್ದುಪಡಿಸಿ, ಅಧಿಕಾರಿಗಳ ಅಮಾನತುಗೊಳಿಸಲಾಗಿದೆ.
ಅಧಿಕಾರಿಗಳು ಶಿಷ್ಟಾಚಾರ ಪ್ರಕಾರ ಆಮಂತ್ರಣ ಕೊಟ್ಟಿದ್ದಾರೆ. ಆದರೆ ಡಿಸಿ ಕಚೇರಿಯಿಂದ ಏಕಾಏಕಿ ಕಾರ್ಯಕ್ರಮ ರದ್ದು ಮಾಡಲಾಗಿದೆ. ರಾಜ್ಯದ ಗ್ರಾಮೀಣಾಭಿವೃದ್ಧಿ ಸಚಿವರ ಹೆಸರಿಲ್ಲ ಅಂತ ರದ್ದು ಮಾಡಲಾಗಿದೆ. ಆದರೆ ಆಮಂತ್ರಣ ಪತ್ರಿಕೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಹೆಸರು ಹಾಕಲಾಗಿದೆ, ಸ್ಪೀಕರ್, ಪರಿಷತ್ ಸದಸ್ಯರ ಹೆಸರೂ ಇತ್ತು.
ಜಿಲ್ಲೆಯ ಬಿಜೆಪಿಯ ಆರೂ ಶಾಸಕರ ಕ್ಷೇತ್ರಗಳಲ್ಲಿ ಹಸ್ತಕ್ಷೇಪ ಮಾಡಲಾಗುತ್ತಿದೆ. ಜಿಲ್ಲಾಧಿಕಾರಿಗಳು ಇವತ್ತು ಬಂದು ಭರವಸೆ ಕೊಟ್ಟು ವಿನಂತಿ ಮಾಡಿದ್ದಾರೆ.ಹೀಗಾಗಿ ನಾವು ಈಗ ಧರಣಿ ವಾಪಸ್ ಪಡೆಯುತ್ತಿದ್ದೇವೆ.ಇವತ್ತು ಸಂಜೆಯೊಳಗೆ ಅಮಾನತು ಆದೇಶ ವಾಪಸ್ ಪಡೆಯಬೇಕು.ಇಲ್ಲದೇ ಇದ್ದರೆ ನಾವು ನಾಳೆ ಮತ್ತೆ ಪ್ರತಿಭಟನೆ ಮಾಡಲಿದ್ದೇವೆ ಎಂದು ಇದೇ ವೇಳೆ ನಳಿನ್ ಎಚ್ಚರಿಕೆ ನೀಡಿದರು.