ಬಂಟ್ವಾಳ,ಆ 14(DaijiworldNews/AK): ಆರೋಗ್ಯ ಸಮಸ್ಯೆ ಮತ್ತು ಕೈಯಲ್ಲಿ ಉದ್ಯೋಗವಿಲ್ಲದೆ ಮನನೊಂದ ಯುವಕ ಬಾವಿಗೆ ಹಾರಿ ಪ್ರಾಣ ಕಳೆದುಕೊಂಡ ಘಟನೆ ಬಂಟ್ವಾಳ ತಾಲೂಕಿನ ಸಜೀಪ ಮೂಡ ಗ್ರಾಮದ ಮಿತ್ತಮಜಲು ನಡೆದಿದೆ.
ಮಿತ್ತಮಜಲು ನಿವಾಸಿ ಸಾಗರ್ ಆಚಾರ್ಯ (26) ಆತ್ಮಹತ್ಯೆ ಮಾಡಿಕೊಂಡ ಯುವಕ. ಬೆಳಿಗ್ಗೆ 8.30 ರ ವೇಳೆ ಮನೆಯಂಗಳದಲ್ಲೇ ಇದ್ದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕಳೆದ ಕೆಲವು ದಿನಗಳಿಂದ ಸಾಗರ್ ಮಾನಸಿಕವಾಗಿ ನೊಂದಿದ್ದ ಎನ್ನಲಾಗಿದೆ. ಕಲೆಗಾರ ಸಾಗರ್ ಕಳೆದ ಎರಡು ವರ್ಷಗಳ ಹಿಂದೆ ಬಿಸಿರೋಡಿನಲ್ಲಿ ಹೊರಗುತ್ತಿಗೆಯಲ್ಲಿ ಕೆಲಸ ಮಾಡುತ್ತಿದ್ದ. ಆದರೆ ಈ ವೇಳೆ ಸಾಗರ್ಗೆ ಕಿಡ್ನಿ ಸಮಸ್ಯೆ ಎದುರಾಯಿತು. ಹೀಗಾಗಿ ಕೆಲಸ ಬಿಟ್ಟು ಮನೆಯಲ್ಲಿ ಇದ್ದ ಸಾಗರ್ಗೆ ವಾರಕ್ಕೊಮ್ಮ ಡಯಾಲಿಸಿಸ್ ಮಾಡಬೇಕಿತ್ತು. ಅಲ್ಲದೇ ಕಿಡ್ನಿ ವೈಫಲ್ಯದ ಹಿನ್ನಲೆ ತಂದೆಯ ಒಂದು ಕಿಡ್ನಿಯನ್ನು ಈತನಿಗೆ ನೀಡಲಾಗಿತ್ತು. ಆದರೆ ಕಿಡ್ನಿ ಕೊಟ್ಟ ಬಳಿಕ ತಂದೆಗೂ ಕೆಲಸ ಮಾಡಲು ಕಷ್ಟಕರವಾಯಿತು.ಇನ್ನೊಂದೆಡೆ ತಾಯಿಗೂ ಅನಾರೋಗ್ಯ ಸಮಸ್ಯೆ ಎದುರಾಯಿತು.
ಹೀಗಾಗಿ ಕುಟುಂಬದಲ್ಲಿ ದುಡಿಯುವ ಕೈಗಳಿಲ್ಲದೇ ಅರ್ಥಿಕ ಸಂಕಷ್ಟ ಎದುರಾಯಿತು. ಇನ್ನೊಂದಡೆ ಅನಾರೋಗ್ಯದ ಸಮಸ್ಯೆಯಿಂದ ಮನನೊಂದು ಸಾಗರ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗುತ್ತಿದೆ. ಸಾಗರ್ ತನ್ನ ಸ್ನೇಹಿತರೊಂದಿಗೆ ಹಾಗೂ ಅಕ್ಕಪಕ್ಕದ ಮನೆಯರೊಂದಿಗೆ ತನ್ನ ಕಷ್ಟವನ್ನು ತೋಡಿಕೊಂಡಿದ್ದ ಎನ್ನಲಾಗುತ್ತಿದೆ
ಬಂಟ್ವಾಳ ಅಗ್ನಿಶಾಮಕ ದಳದಿಂದ ಸಾಗರ್ ಮೃತದೇಹವನ್ನು ಬಾವಿಯಿಂದ ಮೇಲೆತ್ತಲಾಯಿತು. ಮೃತದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ.
ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ತೊಂದರೆಯಲ್ಲಿದ್ದರೆ ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ. ಸಹಾಯವಾಣಿ ಸಂಖ್ಯೆ - 9152987821