ಪುತ್ತೂರು, ಏ 08(SM): ರಾಜ್ಯ ಆರೋಗ್ಯ ಇಲಾಖೆ ಸರಕಾರಿ ಆಸ್ಪತ್ರೆಗಳಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಎಲ್ಲಾ ಡಿ ಗ್ರೂಪ್ ನೌಕರ ಹುದ್ದೆಯನ್ನು ಸ್ಥಗಿತಗೊಳಿಸುವ ಮೂಲಕ ರಾಜ್ಯದಲ್ಲಿರುವ 70 ಸಾವಿರಕ್ಕೂ ಹೆಚ್ಚು ಬಡ ಕಾರ್ಮಿಕರ ಅನ್ನದ ತಟ್ಟೆಯನ್ನು ಕಸಿದಿದೆ ಎಂದು ಪುತ್ತೂರು ಸರಕಾರಿ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸದಸ್ಯ ರಾಜೇಶ್ ಬನ್ನೂರು ಆರೋಪಿಸಿದ್ದಾರೆ.
ಪುತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುತ್ತೂರು ಸರಕಾರಿ ಆಸ್ಪತ್ರೆ ಇತ್ತೀಚಿನ ದಿನಗಳಲ್ಲಿ ಜನರಿಗೆ ಉತ್ತಮ ಸೇವೆಯನ್ನು ನೀಡುವ ಮೂಲಕ ಎಲ್ಲರ ಪ್ರಶಂಸೆಗೂ ಪಾತ್ರವಾಗಿದೆ. ಆದರೆ ಇದೀಗ ರಾಜ್ಯ ಸರಕಾರದ ಈ ಕ್ರಮದಿಂದಾಗಿ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ 17 ಮಂದಿ ಡಿ ಗ್ರೂಪ್ ನೌಕರರನ್ನು ಹುದ್ದೆಯಿಂದ ವಿಮುಕ್ತಿಗೊಳಿಸಲಾಗಿದೆ. ಇದರಿಂದಾಗಿ ಆಸ್ಪತ್ರೆಯ ಸ್ವಚ್ಛತಾ ಕಾರ್ಯ ಸೇರಿದಂತೆ ಬಡ ಜನರಿಗೆ ಸಿಗುತ್ತಿದ್ದ ಸೌಕರ್ಯಗಳಿಗೆ ತೊಂದರೆಯಾಗಿದೆ ಎಂದು ಅವರು ಆರೋಪಿಸಿದರು.
ಡಿ ಗ್ರೂಪ್ ನೌಕರರನ್ನು ಹೊಸದಾಗಿ ನೇಮಿಸದೆ, ಇದೀಗ ಇದ್ದವರನ್ನೂ ಮನೆಗೆ ಕಳುಹಿಸುವ ಕೆಲಸ ಮಾಡುವ ಮೂಲಕ ತುಘಲಕ್ ನೀತಿಯನ್ನು ಖಂಡಿಸಿದ ಅವರು ಕೂಡಲೇ ಸರಕಾರ ಈ ನಿರ್ಧಾರದಿಂದ ಹಿಂದೆ ಸರಿದು ನೌಕರರನ್ನು ಪುನರ್ ನೇಮಿಸಬೇಕೆಂದರು.