ಮಣಿಪಾಲ, ಆ 13 (DaijiworldNews/HR): ಮಣಿಪಾಲ ಭಾಗದಲ್ಲಿ ನಡೆಯುತ್ತಿರುವ ಅಕ್ರಮ ಪಬ್ ಮತ್ತು ಕ್ಲಬ್ ಚಟುವಟಿಕೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಉಡುಪಿ ಜಿಲ್ಲಾ ಪೊಲೀಸರು ವಾರಾಂತ್ಯದಲ್ಲಿ ಕಠಿಣ ಕ್ರಮಕೈಗೊಂಡಿದ್ದಾರೆ.
ಶನಿವಾರ ಆಗಸ್ಟ್ 12 ರಂದು ಮಣಿಪಾಲ ಪೊಲೀಸರು ಯಾವುದೇ ರೀತಿಯ ಡಿಜೆ ಸಂಗೀತ, ಧ್ವನಿ ವ್ಯವಸ್ಥೆಗಳನ್ನು ಬಳಸದಂತೆ ಎಲ್ಲಾ ಪಬ್, ಕ್ಲಬ್ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಅಬಕಾರಿ ಇಲಾಖೆಯೂ ಇದೇ ಆದೇಶ ಹೊರಡಿಸಿದೆ.
ಮಣಿಪಾಲದಲ್ಲಿ ವಾರಾಂತ್ಯದ ಡಿಜೆ ರಾತ್ರಿ ಪಾರ್ಟಿಗಳು ನಡೆಯುತ್ತಿದ್ದ ಕಾರಣ ಮಣಿಪಾಲ ಪೊಲೀಸರು ಭದ್ರತೆಯನ್ನು ಹೆಚ್ಚಿಸಿದ್ದಾರೆ. ಪೊಲೀಸ್ ಇಲಾಖೆ ಮತ್ತು ಅಬಕಾರಿ ಇಲಾಖೆಯ ಆದೇಶದ ಮೇರೆಗೆ ಎಲ್ಲಾ ಪಬ್ ಮಾಲೀಕರು ಮೊದಲೇ ಬುಕ್ ಮಾಡಿದ ಡಿಜೆ ಮ್ಯೂಸಿಕ್ ಪಾರ್ಟಿಗಳನ್ನು ರದ್ದುಗೊಳಿಸಿದ್ದಾರೆ ಮತ್ತು ಪಬ್ಗಳು ಕೇವಲ ಆಹಾರ ಸೇವನೆಯ ಉದ್ದೇಶಕ್ಕಾಗಿ ಮಾತ್ರ ತೆರೆದಿದ್ದವು.
ಇನ್ನು ಮಣಿಪಾಲದಲ್ಲಿ ಕಟ್ಟುನಿಟ್ಟಿನ ಕ್ರಮದ ಹಿನ್ನಲೆಯಲ್ಲಿ ಹೆಚ್ಚುವರಿ ಕೆಎಸ್ಆರ್ಪಿ ಪಡೆಯನ್ನೂ ಹಾಕಲಾಗಿತ್ತು.
ಮೂರು ಚೆಕ್ಪೋಸ್ಟ್ಗಳನ್ನು ಪೊಲೀಸರು ಸ್ಥಾಪಿಸಿದ್ದು, ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ವ್ಯಾಪ್ತಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗಿದೆ.
ಮಣಿಪಾಲದಲ್ಲಿ ನಡೆಯುತ್ತಿರುವ ಅಕ್ರಮ ಪಬ್ಗಳು ಮತ್ತು ಕ್ಲಬ್ಗಳ ವಿರುದ್ಧ ಉಡುಪಿ ಜಿಲ್ಲಾ ಕಾಂಗ್ರೆಸ್ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ ನಂತರ ಈ ಕಟ್ಟುನಿಟ್ಟಿನ ಕ್ರಮಗಳು ಜಾರಿಯಾಗಿವೆ.
ಮೂಲಗಳ ಪ್ರಕಾರ ಈ ಎಲ್ಲಾ ಪಬ್ಗಳು ಮತ್ತು ಕ್ಲಬ್ಗಳು ಪ್ರವಾಸೋದ್ಯಮ ಇಲಾಖೆಯಿಂದ ನೀಡಲಾದ ಸಂಗೀತ ಬಾರ್ ಪರವಾನಗಿ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ಪರವಾನಗಿ ಅಡಿಯಲ್ಲಿ ಮಾಲೀಕರಿಗೆ ಬೆಳಿಗ್ಗೆ 6 ರಿಂದ ರಾತ್ರಿ 10 ರವರೆಗೆ ಮಾತ್ರ ಸಂಗೀತ ವ್ಯವಸ್ಥೆಗಳನ್ನು ಬಳಸಲು ಅನುಮತಿಸಲಾಗಿದೆ ಮತ್ತು ಇದಕ್ಕಾಗಿ ಸ್ಥಳೀಯ ಪೊಲೀಸ್ ಠಾಣೆಗಳಿಂದ ಅಗತ್ಯ ಅನುಮತಿಯನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕಾಗುತ್ತದೆ.