ಪುತ್ತೂರು, ಏ 08(SM): ಕಾಂಗೇಸ್ ಪಕ್ಷ ಧೈರ್ಯವಿದ್ದರೆ ರಾಹುಲ್ ಗಾಂಧಿಯವರನ್ನು ತಮ್ಮ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಲಿ ಎಂಬುವುದಾಗಿ ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಉಸ್ತುವಾರಿ ಹಾಗೂ ವಿಧಾನಸಭಾ ಪ್ರತಿಪಕ್ಷದ ಸಚೇತಕ ಸುನಿಲ್ ಕುಮಾರ್ ಸವಾಲೆಸೆದಿದ್ದಾರೆ.
ಪುತ್ತೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೇಸ್ ಹಾಗೂ ಜೆಡಿಎಸ್ ಪಕ್ಷಕ್ಕೆ ಮೋದಿಯ ಬಗ್ಗೆ ಬಿಜೆಪಿಗಿಂತಲೂ ಹೆಚ್ಚಿನ ಕಾಳಜಿಯಿದೆ. ಪ್ರತಿಯೊಂದು ವಿಷಯದಲ್ಲೂ ಮೋದಿಯ ಬಗ್ಗೆ ಮಾತನಾಡುತ್ತಿದ್ದಾರೆ ಎಂದ ಅವರು ಬಿಜೆಪಿ ಪಕ್ಷ ಎಂದಿಗೂ ಒಂದು ಜಾತಿ, ಸಮುದಾಯದ ಹಿಂದೆ ಹೋಗಿಲ್ಲ. ಜೆಡಿಎಸ್ ಹಾಗೂ ಕಾಂಗ್ರೇಸ್ ಪಕ್ಷ ಒಂದು ಕುಟುಂಬಕ್ಕೆ ಸೀಮಿತವಾಗಿದೆ ಎಂದರು.
ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಮಿಥುನ್ ರೈಯವರು ಭಜರಂಗದಳ, ಆರ್.ಎಸ್.ಎಸ್ ಸಂಘಟನೆಗಳನ್ನು ನಿಷೇಧಿಸುವುದಾಗಿ ಹೇಳಿಕೆ ನೀಡಿದ್ದಾರೆ. ಆದರೆ ಪ್ರತಿ ಗ್ರಾಮದಲ್ಲಿ ಮುಂದಿನ ದಿನಗಳಲ್ಲಿ ಭಜರಂಗದಳದ ಘಟಕವನ್ನು ಆರಂಭಿಸಲಾಗುವುದು. ಮಾತ್ರವಲ್ಲದೆ, ಸ್ವತ ಮಿಥುನ್ ರೈ ಮನೆಗೂ ನಮ್ಮ ಸಿದ್ಧಾಂತಗಳನ್ನು ಮುಟ್ಟಿಸಲಾಗುವುದು ಎಂದರು.