ಬಂಟ್ವಾಳ, ಆ 12 (DaijiworldNews/HR): ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ರಿಕ್ಷಾ ಚಾಲಕರಿಬ್ಬರ ನಡುವೆ ಕಲ್ಲಡ್ಕದ ಅಮ್ಟೂರು ಎಂಬಲ್ಲಿ ಗಲಾಟೆ ನಡೆದಿದ್ದು, ಗಲಾಟೆಯಲ್ಲಿ ಗಾಯಗೊಂಡವರು ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರಿಗೆ ಪ್ರತಿದೂರು ದಾಖಲಾಗಿದೆ.
ಅಮ್ಟೂರು ಗ್ರಾಮದ ಕೇಶವ ನಗರ ನಿವಾಸಿ ಕಿರಣ್ ಹಾಗೂ ಅಮ್ಟೂರು ಗ್ರಾಮದ ಪೊಯ್ಯಕಂಡ ನಿವಾಸಿ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಗೋಪಾಲ ಪೂಜಾರಿ ಅವರು ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾದವರು.
ಕಿರಣ್ ಕಾರ್ಯಕರ್ತನಾಗಿದ್ದು ರಾಜಕೀಯ ದ್ವೇಷವನ್ನು ಹೊಂದಿದ್ದ ಗೋಪಾಲ ಪೂಜಾರಿ ಹಾಗೂ ಅಮ್ಟೂರು ರಿಕ್ಷಾ ಪಾರ್ಕ್ ನಲ್ಲಿದ್ದ ಅವರ ಸಹಪಾಠಿಗಳಾದ ಧನಂಜಯ ಪೂಜಾರಿ, ಸಂತೋಷ್ ಪೂಜಾರಿ, ಜೋಲ್ಸ್ ರಾಯಿ ಅವರು ಸೋಡಾ ಬಾಟಲಿಯಿಂದ ಹೊಡೆದಿದ್ದಾರೆ.ಜೊತೆಗೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂಬ ದೂರನ್ನು ಅವರು ಠಾಣೆಗೆ ನೀಡಿದ್ದಾರೆ.
ಇನ್ನು ಅದಕ್ಕೆ ಪ್ರತಿಯಾಗಿ ಗೋಪಾಲ ಪೂಜಾರಿ ಕೂಡ ದೂರನ್ನು ನೀಡಿದ್ದು, ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಅಮ್ಟೂರು ರಿಕ್ಷಾ ಪಾರ್ಕ್ ನಲ್ಲಿದ್ದ ಕಿರಣ್ ಎಂಬಾತ ಗೋಪಾಲ ಪೂಜಾರಿ ಅವರ ರಿಕ್ಷಾಕ್ಕೆ ಅಡ್ಡ ಇಟ್ಟು ಅವ್ಯಾಚ್ಚ ಶಬ್ದಗಳಿಂದ ಬೈದು, ರಾಡಿನಿಂದ ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ವೈಯಕ್ತಿಕ ವಿಚಾರದಲ್ಲಿ ನಡೆದ ಗಲಾಟೆಯಲ್ಲಿ ಇಬ್ಬರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸ್ಥಳಕ್ಕೆ ಪ್ರಭಾರ ಪೊಲೀಸ್ ಇನ್ಸ್ ಪೆಕ್ಟರ್ ಎಚ್.ನಾಗರಾಜ್, ನಗರ ಠಾಣಾ ಎಸ್ .ಐ.ರಾಮಕೃಷ್ಣ ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.