ಉಡುಪಿ, ಏ 08(SM): ಲೋಕಸಭೆಗೆ ಏಪ್ರಿಲ್ 18 ರಂದು ನಡೆಯುವ ಚುನಾವಣೆ ಸಂದರ್ಭದಲ್ಲಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮತಗಟ್ಟೆಗಳಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ಊಟ ಉಪಹಾರದ ಬಗ್ಗೆ ಮೇಲ್ವಿಚಾರಣೆ ನಡೆಸಲು ನೋಡೆಲ್ ಅಧಿಕಾರಿಗಳನ್ನು ನೇಮಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.
ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಚುನಾವಣಾ ಕರ್ತವ್ಯ ನಿರತ ಸಿಬ್ಬಂದಿಗಳಿಗೆ ಸಕಾಲದಲ್ಲಿ ಊಟ ಉಪಹಾರ ಸರಬರಾಜು ಮಾಡಲು ಮತ್ತು ಉತ್ತಮ ಗುಣಮಟ್ಟದ ಆಹಾರ ಸರಬರಾಜು ಆಗಿರುವುದರ ಕುರಿತು ಪರಿಶೀಲಿಸಲು ಹಾಗೂ ಎಲ್ಲಾ ಮತಗಟ್ಟೆಗಳಿಗೆ ಸಕಾಲದಲ್ಲಿ ಸರಬರಾಜು ಆಗಿರುವುದರ ಬಗ್ಗೆ ಪರಿಶೀಲನೆ ಮತ್ತು ಮೇಲ್ವಿಚಾರಣೆ ನಡೆಸಲು ಶಿಕ್ಷಣ ಇಲಾಖೆಯ ಸಿ.ಆರ್.ಪಿ ಮತ್ತು ಬಿ.ಆರ್.ಪಿ ಅಧಿಕಾರಿಗಳನ್ನು ನಿಯೋಜಿಸಲಾಗುವುದು ಎಂದು ಡಿಸಿ ಹೇಳಿದರು.
ಮಸ್ಟರಿಂಗ್ ಸಮಯದಲ್ಲಿಯೇ ಸಿಬ್ಬಂದಿಗಳಿಗೆ ಕುಡಿಯುವ ನೀರಿನ ಕ್ಯಾನ್ ಗಳು, ಪ್ರಥಮ ಚಿಕಿತ್ಸಾ ಕಿಟ್ ಗಳನ್ನು ವಿತರಿಸಲಾಗುವುದು ಎಂದು ಹೇಳಿದ ಜಿಲ್ಲಾಧಿಕಾರಿಗಳು, ಮತಗಟ್ಟೆಗಳಲ್ಲಿ ಅಗತ್ಯ ನೀರಿನ ವ್ಯವಸ್ಥೆ ಮತ್ತು ವಿದ್ಯುತ್ ವ್ಯವಸ್ಥೆ ಕುರಿತಂತೆ ಸಂಬಂಪಟ್ಟ ತಾಲೂಕು ಕಾರ್ಯ ನಿರ್ವಹಣಾಧಿಕಾರಿಗಳು 2 ದಿನಗಳ ಮುಂಚೆಯೆ ಪರಿಶೀಲಿಸಿ ಸೂಕ್ತ ವ್ಯವಸ್ಥೆ ಮಾಡುವಂತೆ ಡಿಸಿ ಸೂಚಿಸಿದರು.