ಮಂಗಳೂರು,ಏ 08 (MSP): ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಾದ ಬಳಿಕ ದಕ್ಷಿಣ ಕನ್ನಡದಲ್ಲಿ ಜಿಲ್ಲೆಯಲ್ಲಿ ಒಟ್ಟು 464 ಪ್ರಕರಣಗಳು ದಾಖಲಾಗಿದ್ದು, 93,92,437 ಮೌಲ್ಯದ 84,181.02 ಲೀಟರ್ ಮದ್ಯ, 1,07,10,000 ಮೌಲ್ಯದ ಹನ್ನೊಂದು ವಾಹನಗಳ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿಗಳಾಗಿರುವ ಸಸಿಕಾಂತ್ ಸೆಂಥಿಲ್ ಹೇಳಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಏ.8 ರ ಸೋಮವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ಕಳೆದ ಬಾರಿಯ ಚುನಾವಣಾ ಸಂದರ್ಭದಲ್ಲಿ ವೋಟರ್ ಸ್ಲಿಪ್ ಹಾಗೂ ಪಡಿತರ ಚೀಟಿಯನ್ನು ಮತದಾನದ ಕೇಂದ್ರದಲ್ಲಿ ಮತದಾರರು ದಾಖಲೆಯಾಗಿ ನೀಡಬಹುದಿತ್ತು. ಆದರೆ ಇವೆರಡನ್ನು ಈ ಬಾರಿ ಮಾನ್ಯ ಮಾಡಿಲ್ಲ. ಹೀಗಾಗಿ , ಮತದಾರರ ಗುರುತು ಚೀಟಿ ಪಾಸ್ ಪೋರ್ಟ್ , ಡ್ರೈವಿಂಗ್ ಲೈಸೆನ್ಸ್ , ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಅಂಚೆ/ಬ್ಯಾಂಕ್ ನಲ್ಲಿ ತೆರೆದ ಭಾವಚಿತ್ರವಿರುವ ಪಾಸ್ ಬುಕ್ , ಭಾವಚಿತ್ರವಿರುವ ಪಿಂಚಣಿ ದಾಖಲೆಗಳನ್ನು ನೀಡಬಹುದಾಗಿದೆ ಎಂದರು.
ಇದಲ್ಲದೆ ಮಾಧ್ಯಮ ಪ್ರಮಾಣೀಕರಣ ಮತ್ತು ಕಣ್ಗಾವಲು ಸಮಿತಿ ಇದುವರೆಗೆ ಹತ್ತು ದೂರುಗಳನ್ನು ಸ್ವೀಕರಿಸಿದ್ದು, ೧೫ ಕರಪತ್ರಗಳ ವಿಷಯವನ್ನು ಪರಿಶೀಲಿಸಿದೆ. ಮೂರು ಆನ್ ಲೈನ್ ವೆಬ್ ಸೈಟ್ ಗೆ ಪೋಸ್ಟರ್ ಅಪ್ ಲೋಡ್ ಮಾಡಲು ಪೂರ್ಣ ಪ್ರಮಾಣೀಕೃತ ಪತ್ರ ನೀಡಲಾಗಿದೆ. ಎರಡು ಟಿವಿ ಜಾಹೀರಾತುಗಳಿಗೆ ಅನುಮತಿ ನೀಡಲಾಗಿದೆ ಎಂದು ತಿಳಿಸಿದರು.