ಆಲಂಕಾರು, ಎ08(SS): ಪ್ರಧಾನಿ ನರೇಂದ್ರ ಮೋದಿ ಅವರ ದಿಟ್ಟ ನಿರ್ಧಾರಗಳಿಂದಾಗಿ ದೇಶ ಇಂದು ಸದೃಢವಾಗಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಾ ವಿಶ್ವಗುರುವಾಗುತ್ತಿದೆ ಎಂದು ಸುಳ್ಯ ಶಾಸಕ ಎಸ್. ಅಂಗಾರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಈ ಬಾರಿ ದೇಶಕ್ಕೋಸ್ಕರ ಮೋದಿಗಾಗಿ ಮತದಾನ ಮಾಡುತ್ತೇವೆ ಎಂದು ಕಾಂಗ್ರೆಸ್ ಪಕ್ಷದವರೇ ಹೇಳುತ್ತಿದ್ದಾರೆ. ಇದು ನಮ್ಮ ಆತ್ಮ ವಿಶ್ವಾಸವನ್ನು ಇನ್ನೂ ಹೆಚ್ಚಿಸಿದೆ. ಮೋದಿ ಸರಕಾರದ ಅಧಿಕಾರದ ಅವಧಿಯಲ್ಲಿ ದೇಶದ ಅಭಿವೃದ್ದಿಯನ್ನು ಮನಗಂಡು ಈ ಬಾರಿ ಬಿಜೆಪಿಗೆ ಮತ ನೀಡಲಿದ್ದಾರೆ ಎಂದು ಹೇಳಿದ್ದಾರೆ.
ಈ ಬಾರಿಯ ಲೋಕಸಭಾ ಚುನಾವಣೆ ನಮ್ಮ ನಿರೀಕ್ಷೆಗೂ ಮೀರಿ ಬಿಜೆಪಿಗೆ ಗೆಲುವು ತಂದು ಕೊಡಲಿದೆ. ಪಕ್ಕಾ ಕಾಂಗ್ರೆಸ್ ಕಾರ್ಯಕರ್ತರೂ ಮೋದಿಯವರು ಮತ್ತೂಮ್ಮೆ ಅಧಿಕಾರಕ್ಕೇರಬೇಕೆನ್ನುವ ಆಶಯದೊಂದಿಗೆ ಬಿಜೆಪಿಗೆ ಮತ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಮ್ಮ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡುವುದರೊಂದಿಗೆ ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿದ್ದಾರೆ. ಇವರ ವಿರುದ್ಧ ರಾಜಕೀಯ ದುರುದ್ದೇಶದಿಂದ ಅನಗತ್ಯ ಆರೋಪಗಳನ್ನು ಮಾಡುತ್ತಿದ್ದಾರೆ ಹೊರತು ದಾಖಲೆಗಳಿಲ್ಲ. ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಒಂದೂವರೆ ವರ್ಷದಲ್ಲಿ 38 ಕೋಟಿ ರೂಪಾಯಿ ಅನುದಾನ ನೀಡಿ ರಸ್ತೆಗಳ ಅಭಿವೃದ್ಧಿ ಪಡಿಸಿದ್ದಾರೆ ಎಂದು ಹೇಳಿದರು.
ಈ ಬಾರಿ ನಳಿನ್ ಅವರು ಎರಡು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಅಂಗಾರ ವಿಶ್ವಾಸ ವ್ಯಕ್ತಪಡಿಸಿದರು.