ಕಟಪಾಡಿ, ಏ 08 (MSP): ಈ ಹಿಂದೆ ಬಿಜೆಪಿ ಪಕ್ಷದೊಂದಿಗೆ ಕೈ ಜೋಡಿಸಿ ತಪ್ಪು ಮಾಡಿದ್ದೇನೆ. ನನ್ನನ್ನು ನಂಬಿ ಇನ್ನೆಂದೂ ಜೆಡಿಎಸ್ ಈ ರೀತಿ ತಪ್ಪು ಮಾಡುವುದಿಲ್ಲ .ಯಾವುದೇ ಕಾರಣಕ್ಕೂ ಬಿಜೆಪಿ ಜತೆ ಕೈ ಜೋಡಿಸಲ್ಲ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದರು.
ಅವರು ಭಾನುವಾರ ಕಟಪಾಡಿಯಲ್ಲಿ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಮುಖಂಡರ ಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿ ಮಾತನಾಡಿ, ಈ ಹಿಂದೆ ಬಿಜೆಪಿಯ ಅರುಣ್ ಜೇಟ್ಲಿ ಖುದ್ದು ನನ್ನ ಭೇಟಿಯಾಗಿ ಜೆಡಿಎಸ್ ಗೆ 5 ವರ್ಷ ಸರಕಾರ ನಡೆಸಲು ಅವಕಾಶ ನೀಡುತ್ತೇವೆ ಎಂಬ ಭರವಸೆ ನೀಡಿದ ಕಾರಣ ಬಿಜೆಪಿ ಜತೆ ಸೇರಿ ಮೈತ್ರಿ ಸರ್ಕಾರ ರಚನೆ ಮಾಡಿದ್ದೇವೆಯೇ ಹೊರತು, ನನ್ನ ಸ್ವಾರ್ಥಕ್ಕಾಗಿ ಅಲ್ಲ. ನಮ್ಮ ಪಕ್ಷದ ಅಸ್ತಿತ್ವವನ್ನು ಉಳಿಸಿಕೊಳ್ಳುವುದು ಆಗ ಅನಿವಾರ್ಯವಾಗಿತ್ತು ಎಂದರು .
ಮುಸ್ಲಿಮ್ ಬಾಂಧವರೇ ನೀವು ಶಕ್ತಿ ನೀಡಿದರೆ ಸಾಕು. ಕರಾವಳಿಯಲ್ಲಿ ನಮ್ಮ ಮೂರು ಅಭ್ಯರ್ಥಿಗಳನ್ನು ಜಯಗಳಿಸುವಂತೆ ಮಾಡುವುದು ನನ್ನ ಜವಾಬ್ದಾರಿ. ಇನ್ನು ಮೈತ್ರಿ ಅಭ್ಯರ್ಥಿ ಪ್ರಮೋದ್ ಅವರಿಗೆ ಚಿಕ್ಕಮಗಳೂರಿನಲ್ಲಿ 1 ಲಕ್ಷ ಲೀಡ್ ಸಿಗುವುದು ಶತಸಿದ್ದ ಹೀಗಾಗಿ ಈ ಲೆಕ್ಕಚಾರದಿಂದ ಉಡುಪಿಯಲ್ಲಿ ಬಿಜೆಪಿಗೆ ಸಮವಾಗಿ ಮೈತ್ರಿ ಅಭ್ಯರ್ಥಿ ಪ್ರಮೋದ್ ಅವರಿಗೆ ಮತಗಳು ಸಿಕ್ಕರೂ ಸಾಕು ಗೆಲುವು ನಮ್ಮದು. ಉತ್ತರ ಕನ್ನಡದಲ್ಲಿ ಅನಂತ ಕುಮಾರ್ ಹೆಗ್ಡೆಯನ್ನು ಈ ಬಾರಿ ಹೀನಾಯವಾಗಿ ಸೋಲಿಸುವಂತೆ ಮಾಡುವುದು ಖಂಡಿತ. ಆದರೆ ಇದಕ್ಕೂ ಮೊದಲು ಮುಸ್ಲಿಂ ಬಾಂಧವರಿಗೆ ತಮ್ಮ ಶಕ್ತಿ ಏನು ಎಂಬುವುದರ ಅರಿವಿರಬೇಕು. ನೀವೆಲ್ಲಾರೂ ಕೈಜೋಡಿಸಿದರೆ ಈ ಬಾರಿ ಬಿಜೆಪಿ ದೇಶದಲ್ಲೇ ತಲೆ ಎತ್ತದಂತೆ ಮಾಡುವ ಶಕ್ತಿ ಇದೆ ಎಂದು ಮುಖ್ಯಮಂತ್ರಿ ಹೇಳಿದರು.