ಮಂಗಳೂರು, ಎ08(SS): ಮಂಗಳೂರು ಧರ್ಮಪ್ರಾಂತ್ಯದ ಚರ್ಚ್ಗಳಲ್ಲಿ ಇದೇ ಮೊದಲ ಬಾರಿಗೆ ತೈಝೇ ಪ್ರಾರ್ಥನಾ ವಿಧಿಯನ್ನು ಆಚರಿಸಲಾಗುತ್ತಿದೆ.
ಮಂಗಳೂರು ಧರ್ಮಪ್ರಾಂತ್ಯದಲ್ಲಿರುವ ಪ್ರಮುಖ ಚರ್ಚ್ಗಳಲ್ಲಿ ಯುವಜನತೆಯಲ್ಲಿ ಹೊಸ ಆತ್ಮವಿಶ್ವಾಸ ತುಂಬುವ ಜತೆಗೆ ದುರಭ್ಯಾಸಗಳಿಂದ ದೂರ ಇರುವಂತೆ ಪ್ರೇರಣೆ ನೀಡುವ ನಿಟ್ಟಿನಲ್ಲಿ ಈ ಪ್ರಾರ್ಥನೆ ನಡೆಸಲಾಗುತ್ತಿದೆ. ದುರಭ್ಯಾಸಗಳಿಗೆ ಬಲಿ ಬೀಳದೇ ಉತ್ತಮ ಸಮಾಜ ನಿರ್ಮಾಣ ಮಾಡುವಂತವರಾಗಬೇಕು ಎನ್ನುವುದು ಈ ಪ್ರಾರ್ಥನೆಯ ಉದ್ದೇಶ.
ರಾತ್ರಿ ಸಮಯದಲ್ಲಿ ಈ ಪ್ರಾರ್ಥನಾ ವಿಧಿಯನ್ನು ನಡೆಸಲಾಗುತ್ತದೆ. ಯೇಸುಕ್ರಿಸ್ತನ ಶಿಲುಬೆಯ ಮಾದರಿಯನ್ನು ಇಟ್ಟು ಅದರ ಸುತ್ತ ದೀಪ ಉರಿಸಲಾಗುತ್ತದೆ. ಹೆಚ್ಚಾಗಿ ಯುವಜನತೆ ಈ ಪ್ರಾರ್ಥನಾ ವಿಧಿಯಲ್ಲಿ ಭಾಗವಹಿಸುತ್ತಾರೆ. ನಿರಂತರ ಪ್ರಾರ್ಥನೆ, ಬೈಬಲ್ ಪಠಣ ಹಾಗೂ ಯೇಸುವಿನ ಭಜನೆಗಳನ್ನು ಹಾಡುವುದು ಈ ಪ್ರಾರ್ಥನೆಯ ವಿಧಿ ವಿಧಾನ.
ಕಪ್ಪು ದಿನದ ಮಾಸಾಚರಣೆಯಲ್ಲಿ ತೊಡಗಿಕೊಂಡಿರುವ ಕ್ರೈಸ್ತರು ಈ ತಿಂಗಳಲ್ಲಿ ತೈಝೇ ವಿಶಿಷ್ಟ ಪ್ರಾರ್ಥನಾ ವಿಧಿ ಆಚರಿಸುತ್ತಿದ್ದಾರೆ. ಈ ವರ್ಷವನ್ನು ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯವು ಯುವಜನತೆಯ ವರ್ಷವನ್ನಾಗಿ ಆಚರಣೆ ಮಾಡುತ್ತಿದೆ ಎಂದು ಚರ್ಚಿನ ಮೂಲಗಳು ತಿಳಿಸಿದೆ.
ಈ ಪ್ರಾರ್ಥನೆಯ ಮೂಲ ಫ್ರಾನ್ಸ್ ದೇಶ ಎನ್ನುವುದು ವಿಶೇಷ. ಕರಾವಳಿಯಲ್ಲಿ ಮೊದಲ ಬಾರಿ ನಡೆಯುತ್ತಿರುವ ತೈಝೇ ಪ್ರಾರ್ಥನೆ ಹೆಚ್ಚು ಜನಪ್ರಿಯವಾಗುತ್ತಿದೆ.