ಕುಂದಾಪುರ, ಏ08 (MSP): ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕ ರಾಜ್ಯದಲ್ಲಿ 22 ಸ್ಥಾನಗಳನ್ನು ಗೆಲ್ಲುವುದರ ಜೊತೆಗೆ ಕೇಂದ್ರದಲ್ಲಿ 200 ಸ್ಥಾನಗಳನ್ನು ಪಡೆದು ಮತ್ತೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಸ್ತತ್ವಕ್ಕೆ ಬರುವುದು ಶತಃಸಿದ್ಧ ಎಂದು ಮಾಜಿ ಮುಖ್ಯಮಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಅವರು ಭಾನುವಾರ ಸಂಜೆ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನೆಂಪುವಿನಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿವೈ ರಾಘವೇಂದ್ರರವರ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ವಿರೋಧಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಈ ಬಾರಿಯ ಚುನಾವಣೆಯಲ್ಲಿ ಸೋಲುವುದರ ಮೂಲಕ ಕಲ್ಬುರ್ಗಿ ಕ್ಷೇತ್ರ ಬಿಜೆಪಿ ಪಾಲಾಗಲಿದೆ. ದೇವೆಗೌಡರೂ ಮನೆಗೆ ಹೋಗಲಿದ್ದು ವಿಶ್ರಾಂತ ಜೀವನಕ್ಕೆ ತುಮಕೂರಿನ ಮತದಾರರು ಕಳಿಸಿಕೊಡಲಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು.
ಮಂಡ್ಯದಲ್ಲಿ ಅಂಬರೀಶ್ ಸಾವನ್ನಪ್ಪಿದಾಗ ಮಂಡ್ಯದಲ್ಲಿ ಅವರ ಪಾರ್ಥೀವ ಶರೀರ ನೋಡಲು ಲಕ್ಷಾಂತರ ಮಂದಿಗೆ ಅವಕಾಶ ಕಲ್ಪಿಸಿಕೊಟ್ಟ ಮುಖ್ಯಮಂತ್ರಿ ಇಂದು ಅಂಬರೀಶ್ ಮಂಡ್ಯ ಜಿಲ್ಲೆಗೆ ಏನು ಕೊಡುಗೆ ಕೊಟ್ಟಿದ್ದಾರೆ ಎಂದು ಕೇಳುತ್ತಿದ್ದಾರೆ. ಹೆಣ್ಣುಮಗಳನ್ನು ಅಪಮಾನ ಮಾಡುವ ಕೆಲಸಕ್ಕೆ ಕುಮಾರಸ್ವಾಮಿ ಮುಂದಾಗಿದ್ದಾರೆ. ಇದನ್ನು ಮಂಡ್ಯ ಜಿಲ್ಲೆಯ ಜನ ಸಹಿಸೋದಿಲ್ಲ. ಅದಕ್ಕಾಗಿಯೇ ಮಂಡ್ಯದಲ್ಲಿ ಸುಮಲತಾ ಗೆಲ್ಲಲು ನಾವು ಬೇಷರತ್ ಬೆಂಬಲ ಕೊಟ್ಟಿದ್ದೇವೆ ಎಂದರು.
20% ಕಮಿಶನ್ ಸರ್ಕಾರ: ಹಾಸನ ಜಿಲ್ಲೆಯಲ್ಲಿ ಐದು ನೀರಾವರಿ ಯೋಜನೆಗಳಿಗೆ ಸಾವಿರದ ಮುನ್ನೂರ ನಲವತ್ತನಾಲ್ಕು ಕೋಟಿ ಕಾಮಗಾರಿ ಆರಂಭಕ್ಕೂ ಮುನ್ನಾ 20% ಕಮಿಶನ್ ಪಡೆದು ಮುಂಗಡ ಹಣ ಕೊಟ್ಟಿದ್ದಾರೆ. ಇದು ಕುಮಾರಸ್ವಾಮಿಯವರ ಹಗಲು ದರೋಡೆ. ನರೇಂದ್ರ ಮೋದಿಯವರು ರಾಜ್ಯ ಸರ್ಕಾರವನ್ನು 10 ಪರ್ಸೆಂಟ್ ಕಮೀಷನ್ ಸರ್ಕಾರ ಎಂದಿದ್ದರು. ಆದರೆ ಅದು 20% ಕಮೀಷನ್ ಸರ್ಕಾರ ಎಂಬುದು ಬಹಿರಂಗವಾಗಿದೆ. ಸುಳ್ಳು ಹೇಳಿ, ಜನರಿಗೆ ವಂಚನೆ ಮಾಡಿ ರಾಜ್ಯವನ್ನು ದಿವಾಳಿ ಹಂತಕ್ಕೆ ತಲುಪಿಸಿದ್ದಾರೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿಯವರ ವಿರುದ್ದ ವಾಗ್ದಾಳಿ ನಡೆಸಿದರು.
ಹಿಂದೆ ಕಾಂಗ್ರೆಸ್ ಆಡಳಿತದಲ್ಲಿದ್ದಾಗ ದೇಶ ಆರ್ಥಿಕ ದಿವಾಳಿಯಾಗಿತ್ತು. ಮೋದಿ ಬಂದ ಬಳಿಕ ಸುಧಾರಿಸಿದೆ. ಆದರೂ ಬಚ್ಚಾ ರಾಹುಲ್ ಗಾಂಧಿ ಇನ್ನೂ ಮನಬಂದಂತೆ ಹುಡುಗಾಟಿಕೆಯ ಮಾತುಗಳನ್ನಾಡುತ್ತಿದ್ದಾರೆ. ರಾಹುಲ್ ಗಾಂಧಿ ಪ್ರಧಾನಿಯಾಗುವುದು ತಿರುಕನ ಕನಸು. ಅನುಮಾನಗಳಿರುವ ಮನೆಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಹಿಂದೆ ನಮ್ಮ ನಾಯಕ ದಾವಣಗೆರೆ ಸಿದ್ದೇಶ್ ಹಾಗೂ ಡಾ. ಅಶ್ವಥ್ ನಾರಾಯಣ್ ಮನೆ ಮೇಲೂ ದಾಳಿ ನಡೆದಿತ್ತು. ಆದರೆ ನಾವ್ಯಾವತ್ತೂ ಬೊಬ್ಬೆ ಹೊಡೆದಿಲ್ಲ. ಐಟಿ ಅಧಿಕಾರಿಗಳು ತಮ್ಮ ಕರ್ತವ್ಯಗಳನ್ನು ಮಾಡುತ್ತಿದ್ದಾರೆ. ಓರ್ವ ಜವಾಬ್ದಾರಿಯುತ ಸ್ಥಾನದಲ್ಲಿರುವ ಈ ರಾಜ್ಯದ ಮುಖ್ಯಮಂತ್ರಿ ಐಟಿ ದಾಳಿಯನ್ನು ಬಹಿರಂಗಪಡಿಸಿ ತಮ್ಮ ಬಂಧು ಬಳಗ ಲೂಟಿ ಮಾಡಿ ಕೂಡಿಟ್ಟ ಹಣವನ್ನು ವರ್ಗಾವಣೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಆದರೆ ಕುಮಾರಸ್ವಾಮಿಯವರು ಐಟಿ ಅಧಿಕಾರಿಗಳು ಕೇಂದ್ರ ಅಣತಿಯಂತೆ ನಮ್ಮ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಇದನ್ನು ರಾಜ್ಯದ ಜನತೆ ಕ್ಷಮಿಸಲ್ಲ ಎಂದರು.
ಪ್ರಧಾನಿ ಮೋದಿ 3 ಕೋಟಿ ಶೌಚಾಲಯ, ಒಂದೂವರೆ ಕೋಟಿ ಮನೆ ನಿರ್ಮಾಣ, ಎಂಟು ಕೋಟಿ ಉಜ್ವಲ ಯೋಜನೆಯಡಿಯಲ್ಲಿ ಗ್ಯಾಸ್ ವಿತರಣೆ, ಹನ್ನೆರಡುವರೆ ಕೋಟಿ ರೈತರಿಗೆ ಪ್ರತೀವರ್ಷ ಆರು ಸಾವಿರ ರೂ. ಕೊಡುವಂತಹ ೭೫ಸಾವಿರ ಕೋಟಿ ಯೋಜನೆ ಆಯುಷ್ಮಾನ್ ಭಾರತ್ ಜಾರಿಗೆ ತಂದಿದ್ದಾರೆ. ಇನ್ನೂ ಹಲವು ಕ್ರಾಂತಿಕಾರಿ ಬದಲಾವಣೆಯನ್ನು ಪ್ರಧಾನಿ ಮೋದಿಯವರು ಮಾಡಿದ್ದಾರೆ. ದೇಶದ ಆರ್ಥಿಕ ಸ್ಥಿತಿ ಕುಸಿದಿದೆ ಎನ್ನುವ ರಾಹುಲ್ ಗಾಂಧಿ ಗಮನಿಸಬೇಕು. ಆರ್ಥಿಕ ಸ್ಥಿತಿಯಲ್ಲಿ ಹನ್ನೊಂದನೆ ಸ್ಥಾನದಲ್ಲಿದ್ದ ಭಾರತ ಇಂದು ಐದನೇ ಸ್ಥಾನದಲ್ಲಿದೆ. ಇದು ಪ್ರಧಾನಿ ಮೋದಿಯವರ ಆಡಳಿತ ವೈಖರಿ ಎಂದು ಕೇಂದ್ರ ಸರ್ಕಾರದ ಜನಪರ ಯೋಜನೆಗಳನ್ನು ವಿವರಿಸಿದರು.
ಕಾಂಗ್ರೆಸ್ ಮುಕ್ತ ಭಾರತ ಗಾಂಧಿ ಅಪೇಕ್ಷೆ: ಗಾಂಧೀಜಿ ಕಾಂಗ್ರೆಸ್ ಮುಕ್ತ ಭಾರತದ ಕನಸು ಕಂಡಿದ್ದರು ಎನ್ನುವ ಹೇಳಿಕೆಯನ್ನು ಯಡಿಯೂರಪ್ಪ ಇದೇ ಸಂದರ್ಭದಲ್ಲಿ ಹೇಳಿದರು. ಅದೇ ಕಾರಣಕ್ಕೆ ಅದನ್ನು ಬಿಜೆಪಿ ನೆರವೇರಿಸುವ ಸಂಕಲ್ಪ ಮಾಡಿದೆ ಎಂದರು.
ಚುನಾವಣೆ ನಂತರ ಯಡಿಯೂರಪ್ಪ ಕೇಸ್ ರೀ ಒಪನ್ ಮಾಡಿಸುತ್ತೇನೆ ಎಂದು ಸಿ.ಎಂ. ಕುಮಾರಸ್ವಾಮಿ ಹೇಳಿರುವುದು ಗಮನಿಸಿದ್ದೇನೆ. ತಾಕತ್ತು ಇದ್ದರೆ ಎಪ್ರಿಲ್ 23ರ ಮೊದಲೇ ಓಪನ್ ಮಾಡಿಸಲಿ. ಅದರ ನಂತರ ಸಿಎಂ ಮನೆಗೆ ಹೋಗುತ್ತಾರೆ. ಬಳಿಕ ಅವರ ಕೇಸನ್ನು ನಾವೇ ಓಪನ್ ಮಾಡಿಸ್ತೇವೆ ಎಂದು ಸವಾಲು ಹಾಕಿದರು.
ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಬೈಂದೂರು ಶಾಸಕ ಸುಕುಮಾರ ಶೆಟ್ಟಿ, ಕಾರ್ಕಳ ಶಾಸಕ ಸುನೀಲ್ ಕುಮಾರ್, ರಾಜ್ಯ ಯುವಮೋರ್ಚಾ ಅಧ್ಯಕ್ಷ ವಿಜಯೇಂದ್ರ, ಬಿಜೆಪಿ ಮುಖಂಡರುಗಳಾದ ಭಾರತಿ ಶೆಟ್ಟಿ, ಗುರ್ಮೆ ಸುರೇಶ್ ಶೆಟ್ಟಿ, ಸಂದ್ಯಾ ಕಾಮತ್, ಡಾ.ಅತುಲ್ ಕುಮಾರ್, ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಯಶ್ಪಾಲ್ ಸುವರ್ಣ, ಸುಪ್ರಸಾದ್ ಶೆಟ್ಟಿ, ಬೈಂದೂರು ಬಿಜೆಪಿ ಕ್ಷೇತ್ರಾಧ್ಯಕ್ಷ ಸದಾನಂದ ಉಪ್ಪಿನಕುದ್ರು, ಕಾರ್ಯದರ್ಶಿ ದೀಪಕ್ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.