ಮಂಗಳೂರು, ಎ08(SS): ನಗರದಿಂದ ದೇಶದ ಬೇರೆ ಬೇರೆ ಕಡೆಗಳಿಗೆ ಹೋಗುವ ಎಲ್ಲ ವಿಮಾನಗಳ ದರದಲ್ಲಿ ಭಾರಿ ಏರಿಕೆಯಾಗಿದ್ದು, ಆಯ್ದ ಮಾರ್ಗಗಳಲ್ಲಿ ವಿಮಾನದ ಟಿಕೆಟ್ ದರ ಶೇ. 100ರಿಂದ 140ರಷ್ಟು ಹೆಚ್ಚಳವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕಳೆದ ಕೆಲ ದಿನಗಳಿಂದ ಮಂಗಳೂರಿನಿಂದ ವಿಮಾನದಲ್ಲಿ ತೆರಳುವ ಪ್ರಯಾಣಿಕರ ಸಂಖ್ಯೆ ಬಹಳಷ್ಟು ಹೆಚ್ಚಳವಾಗಿದೆ. ಹೀಗಾಗಿ ಕೆಲ ಕಾರಣಗಳನ್ನು ನೀಡಿ ಮಂಗಳೂರು ವಿಮಾನ ನಿಲ್ದಾಣದಿಂದ ಹಾರಾಟ ನಡೆಸುವ ವಿಮಾನಗಳ ಸಂಖ್ಯೆಯನ್ನು ಇಳಿಸಲಾಗಿದೆ. ಜೊತೆಗೆ ಮಕ್ಕಳ ಬೇಸಿಗೆ ರಜೆ ಸೇರಿದಂತೆ ನಾನಾ ಕಾರಣಗಳಿಗೆ ವಿಮಾನಗಳ ದರದಲ್ಲಿ ಭಾರಿ ಏರಿಕೆಯಾಗಿದೆ.
ಮಂಗಳೂರು- ಬೆಂಗಳೂರು, ಮಂಗಳೂರು- ಮುಂಬೈ ಹಾಗೂ ಮಂಗಳೂರು ದಿಲ್ಲಿ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ವಿಮಾನ ಟಿಕೆಟ್ ದರದಲ್ಲಿ ಭಾರಿ ಏರಿಕೆಯಾಗಿದೆ. ಮಂಗಳೂರಿನಿಂದ ಮುಂಬಯಿಗೆ ಎಂಟು ಸಾವಿರ ರೂ. ಇದ್ದ ಟಿಕೆಟ್ ದರ 20 ಸಾವಿರಕ್ಕೆ ಹೆಚ್ಚಳವಾಗಿದೆ. ಮಂಗಳೂರು- ದಿಲ್ಲಿ ನಡುವೆ ಇನ್ ಡೈರೆಕ್ಟ್ ಫ್ಲೈಟ್ ದರ ಕೂಡ 20 ಸಾವಿರಕ್ಕಿಂತಲೂ ಹೆಚ್ಚು ಏರಿಕೆ ಕಂಡಿದೆ ಎಂದು ಪ್ರಯಾಣಿಕರು ತಿಳಿಸಿದ್ದಾರೆ.