ಮಂಗಳೂರು, ಎ08(SS): ಮೋದಿ ಸುನಾಮಿಯಲ್ಲಿ ಕಾಂಗ್ರೆಸ್ ಕೊಚ್ಚಿ ಹೋಗಲಿದೆ ಎಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಜಗದ್ಗುರು ಭಾರತದ ಸಂಕಲ್ಪದೊಂದಿಗೆ ತಾನು ನೀಡಿರುವ ಜನಪರ, ಭ್ರಷ್ಟಾಚಾರ ರಹಿತ ಆಡಳಿತ ಮತ್ತು ಸಬ್ಕಾ ಸಾಥ್ ಸಬ್ ಕಾ ವಿಕಾಸ್ ಎಂಬ ಮೂರು ಭರವಸೆಯಂತೆ ಕಾರ್ಯ ನಿರ್ವಹಿಸಿದ್ದು, ಮತ್ತೆ ನರೇಂದ್ರ ಮೋದಿಯವರೇ ಭಾರತದ ಪ್ರಧಾನಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮೋದಿ ಪ್ರಧಾನಿಯಾದ ಬಳಿಕ ಕಾಶ್ಮೀರ ಹೊರತುಪಡಿಸಿ ಬೇರೆಲ್ಲೂ ಬಾಂಬ್ ಸ್ಫೋಟವಾಗಿಲ್ಲ. ಅಭಿವೃದ್ಧಿ ಚಿಂತನೆಯ ರಾಜಕಾರಣ ಗೂಂಡಾಗಿರಿಯ ರಾಜಕಾರಣ ಬೇಕಾ, ಅಥವಾ ಸಜ್ಜನಿಕೆಯ ರಾಜಕಾರಣ ಬೇಕಾ ಎಂದು ಮತದಾರರು ತೀರ್ಮಾನಿಸಬೇಕು ಎಂದು ಹೇಳಿದ್ದಾರೆ.
ಜಿಲ್ಲೆಯಲ್ಲಿ ಏಳು ಮಂದಿ ಬಿಜೆಪಿ ಶಾಸಕರು ಬಂದ ಮೇಲೆ ಯಾವುದೇ ಕೊಲೆಗಳಾಗಿಲ್ಲ. ಗೋ ಕಳ್ಳತನ ನಡೆಯಲಿಲ್ಲ. ಆದುದರಿಂದ ಸಾಮರಸ್ಯದ ಅಭಿವೃದ್ಧಿ ಚಿಂತನೆಯ ರಾಜಕಾರಣ ಜನತೆಗೆ ಬೇಕಾಗಿದೆ ಎಂದು ತಿಳಿಸಿದರು.
ಮೋದಿ ಪ್ರಧಾನಿಯಾದ ಬಳಿಕ ದೇಶದಲ್ಲಿ ಪರಿವರ್ತನೆಯಾಗಿದೆ. ಕಳೆದ 5 ವರ್ಷಗಳಲ್ಲಿ ದೇಶಕ್ಕೆ 153 ಯೋಜನೆಗಳನ್ನು ಜಾರಿಗೊಳಿಸುವುದರ ಜತೆಗೆ ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದಾರೆ. ಜಗತ್ತಿಗೆ ಭಾರತದ ಸೈನಿಕ ಶಕ್ತಿಯ ಪರಿಚಯ ಮಾಡಿದ್ದಾರೆ. ಬಡಜನತೆಗೆ ಗ್ಯಾಸ್, ಆಯುಷ್ಮಾನ್ ಯೋಜನೆ, ವಿದ್ಯುತ್ ಒದಗಿಸುವುದರ ಮೂಲಕ ಮೋದಿ ಅಲೆ ಮನೆ ಮಾತಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.