ಕಾಪು, ಏ 07(SM): ಈ ಬಾರಿಯ ಲೋಕಸಭಾ ಚುನವಣೆಗೆ ಕಾಂಗ್ರೇಸ್ ಪಕ್ಷ ಪ್ರಕಟಿಸಿರುವ ಪ್ರಣಾಳಿಕೆ ದೇಶದ ಸಮಗ್ರತೆ ಮತ್ತು ಭದ್ರತೆಯ ದೃಷ್ಠಿಯಿಂದ ಅತ್ಯಂತ ಅಪಾಯಕಾರಿಯಾಗಿದ್ದು ದೇಶದ ಹಿತಕ್ಕೆ ಗಂಡಾಂತರಕಾರಿಯಾಗಿದೆ ಎಂದು ಸಂಸದೆ ಹಾಗೂ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಆತಂಕ ವ್ಯಕ್ತಪಡಿಸಿದ್ದಾರೆ.
ಕಾಪು ಕ್ಷೇತ್ರದ ಕೆಮ್ತೂರಿನಲ್ಲಿ ಶನಿವಾರ ಬಿಜೆಪಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಶೋಭಾ ಕರಂದ್ಲಾಜೆ ಮಾತನಾಡಿದರು. ಕಾಶ್ಮೀರದಲ್ಲಿನ ಸೇನೆಯ ಹಿಂತೆಗೆತ, ದೇಶದ್ರೋಹದ ಕಾನೂನಿನ ರದ್ದು, ಸಶಸ್ತ್ರ ಪಡೆಗಳಿಗೆ ನೀಡಲಾಗಿದ್ದ ಅಧಿಕಾರದ ಕಡಿತವೇ ಮೊದಲಾದ ಅಂಶಗಳಿರುವ ಕಾಂಗ್ರೇಸ್ ಪ್ರಣಾಳಿಕೆ ಈ ದೇಶದ ಸಮಗ್ರತೆಗೆ ನೀಡಿದ ಸವಾಲಾಗಿದೆ ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿನ ತನ್ನ ಕಳೆದ 5 ವರ್ಷಗಳ ಅವಧಿಯಲ್ಲಿನ ಸಾಧನೆಗಳನ್ನು ಶೋಭಾ ಕರಂದ್ಲಾಜೆ ಕಾರ್ಯಕರ್ತರಿಗೆ ವಿವರಿಸಿದರು. ಕಾಪು ಶಾಸಕ ಲಾಲಾಜಿ. ಆರ್ ಮೆಂಡನ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಕಾಪು ಕ್ಷೇತ್ರ ಸಮಿತಿ ಅಧ್ಯಕ್ಷ ಪಾದೆಬೆಟ್ಟು ಪ್ರಕಾಶ್ ಶೆಟ್ಟಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕುಯಿಲಾಡಿ ಸುರೇಶ್ ನಾಯಕ್, ಅಲೆವೂರು ಗ್ರಾ. ಪಂ. ಅಧ್ಯಕ್ಷ ಶ್ರೀಕಾಂತ್ ನಾಯಕ್, ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ, ಜಿ. ಪಂ. ಅಧ್ಯಕ್ಷ ದಿನಕರ್ ಬಾಬು ಮತ್ತಿತರರು ಉಪಸ್ಥಿತರಿದ್ದರು.