ಮಂಗಳೂರು, ಏ 06(SM): ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಕ್ರಿಕೆಟ್ ಬೆಟ್ಟಿಂಗ್ ನಿರತ ನಾಲ್ವರು ಬುಕ್ಕಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಉರ್ವ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವಿಜಯಪುರ ಜಿಲ್ಲೆಯ ತಾಳಿಕೋಟೆಯ ಹಾಜಿ ಇಸ್ಮಾಯಿಲ್ (26), ಮಂಗಳೂರಿನ
ಅಡ್ಯಾರ್ ಒಳಚಿಲ್ ನ ಇಸ್ಮಾಯಿಲ್ (65), ಬೆಳ್ತಂಗಡಿಯ ಜೋಸೆಫ್ (27) ಹಾಗೂ ಜೆರಾಲ್ಡ್ ಡಿಸೋಜ ಬಂಧಿತ ಆರೋಪಿಗಳು.
ಬಿಜೈಯ ಅನಲಾ ಲಾಡ್ಜ್ ನಲ್ಲಿ ಕ್ರಿಕೆಟ್ ಲೈವ್ ಬಜ್ ಎಂಬ ಆಪ್ ಮೂಲಕ ಇಸ್ಮಾಯಿಲ್, ಹಾಜಿ ಇಸ್ಮಾಯಿಲ್ ಹಾಗೂ ಜೋಸೆಫ್ ಬೆಟ್ತಿಂಗ್ ನಡೆಸುತ್ತಿದ್ದರು. ಈ ಬಗ್ಗೆ ಲಭಿಸಿದ ಖಚಿತ ಮಾಹಿತಿಯಂತೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಆರೋಪಿಗಳಿಂದ ಮೊಬೈಲ್ ಗಳು ಹಾಗೂ ಸಾರ್ವಜನಿಕರಿಂದ ಅಕ್ರಮವಾಗಿ ಬೆಟ್ಟಿಂಗ್ ಮೂಲಕ ಸಂಗ್ರಹಿಸಿದ ನಗದನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಇನ್ನು ಇದೇ ಠಾಣಾ ವ್ಯಾಪ್ತಿಯಲ್ಲಿ ನಡೆಸಿದ ಮತ್ತೊಂದು ಕಾರ್ಯಾಚರಣೆಯಲ್ಲಿ ಒಲಿವಾ ಅಪಾರ್ಟಮೆಂಟ್ ನ ಪ್ಲಾಟ್ ನಲ್ಲಿ ನಡೆಯುತ್ತಿದ್ದ ಬೆಟ್ಟಿಂಗ್ ದಂಧೆಯನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಇರ್ವಿನ್ ಜೆರಾಲ್ಡ್ ಡಿಸೋಜಾ ಆರೋಪಿಯಾಗಿದ್ದು, ವಿವಿಧ ಆನ್ ಲೈನ್ ಆಪ್ ಗಳ ಮೂಲಕ ಬೆಟ್ಟಿಂಗ್ ದಂಧೆ ನಡೆಸಲಾಗುತ್ತಿತ್ತು. ಈ ಬಗ್ಗೆ ಲಭಿಸಿದ ಖಚಿತ ಮಾಹಿತಿಯಂತೆ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿ ಜೆರಾಲ್ಡ್ ನಿಂದ ನಗದು, ಲ್ಯಾಪ್ ಟಾಪ್, ಮೊಬೈಲ್ ವಶಕ್ಕೆ ಪಡೆಯಲಾಗಿದೆ.
ಬಂಧಿತ ಆರೋಪಿಗಳನ್ನು ಉರ್ವಾ ಠಾಣಾ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.