ಉಡುಪಿ, ಎಂ6(SS): ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ನಾಮಪತ್ರ ಸಲ್ಲಿಸುವ ವೇಳೆ ಪೂರ್ಣ ಆಸ್ತಿ ವಿವರ ಸಲ್ಲಿಸದಿರುವ ಕಾರಣ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಒತ್ತಾಯಿಸಿದ್ದಾರೆ.
ಕೆಲ ದಿನಗಳ ಹಿಂದೆಯಷ್ಟೇ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿರುವ ಪ್ರಮೋದ್ ಮಧ್ವರಾಜ್ ನಾಮಪತ್ರ ಸಲ್ಲಿಕೆ ವೇಳೆ ಪೂರ್ಣ ಆಸ್ತಿ ವಿವರ ಸಲ್ಲಿಸಿಲ್ಲ ಎಂಬ ಆರೋಪ ಮಾಡಿ ಸತೀಶ್ ಎಂಬುವವರು ಚುನಾವಣಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು.
ಈ ಹಿನ್ನೆಲೆಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯಿಸಿದ್ದು, ಜಿಲ್ಲಾ ಚುನಾವಣಾಧಿಕಾರಿಗಳು ಪ್ರಮೋದ್ ಮಧ್ವರಾಜ್ ಅವರ ನಾಮಪತ್ರ ಸರಿಯಾಗಿ ಪರಿಶೀಲನೆ ಮಾಡಬೇಕು. ಮಾತ್ರವಲ್ಲ, ನಾಮಪತ್ರದ ಜೊತೆಗಿನ ಅಫಿಡವೆಟ್ನ ಲೋಪ ಪತ್ತೆ ಹಚ್ಚಿ ಕಾನೂನಿನ ಮೂಲಕ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.