ಸುಳ್ಯ, ಎಂ6(SS): ನಮ್ಮ ದೇಶಕ್ಕೆ ಬಿಜೆಪಿಯಷ್ಟು ದ್ರೋಹವೆಸಗಿದ ಪಕ್ಷ ಬೇರೊಂದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಟೀಕಿಸಿದ್ದಾರೆ.
.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ದೇಶಕ್ಕೆ ಬಿಜೆಪಿಯಷ್ಟು ದ್ರೋಹವೆಸಗಿದ ಪಕ್ಷ ಬೇರೊಂದಿಲ್ಲ. ಹೀಗಾಗಿ ಮತದಾರರು ಈ ಚುನಾವಣೆಯಲ್ಲಿ ಬಿಜೆಪಿಯನ್ನು ತಿರಸ್ಕರಿಸಲಿದ್ದಾರೆ. ಕಳೆದ 5 ವರ್ಷಗಳ ಎನ್ಡಿಎ ನೇತೃತ್ವದ ಸರಕಾರ ಎಲ್ಲ ಹಂತಗಳಲ್ಲೂ ವಿಫಲವಾಗಿದೆ. ಕೇವಲ ಮಾತಿನ ಸರಕಾರವಾಗಿದೆಯೇ ವಿನಹ ಕೃತಿಯ ಸರಕಾರವಾಗಿಲ್ಲ ಎಂದು ಆರೋಪಿಸಿದರು.
ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರು ಏ. 7ರಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ - ಜೆಡಿಎಸ್ ಸಮ್ಮಿಶ್ರ ಅಭ್ಯರ್ಥಿ ಮಿಥುನ್ ರೈ ಪರ ಚುನಾವಣಾ ಪ್ರಚಾರಕ್ಕೆ ಸುಳ್ಯಕ್ಕೆ ಆಗಮಿಸಲಿದ್ದಾರೆ. ಸಂಜೆ 4 ಗಂಟೆಗೆ ಸುಳ್ಯ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ನಡೆಯಲಿರುವ ಪ್ರಚಾರ ಸಭೆಯಲ್ಲಿ ಮಾತನಾಡಲಿದ್ದಾರೆ ಎಂದು ತಿಳಿಸಿದರು.
ಕಳೆದ 10 ವರ್ಷಗಳಿಂದ ಇಲ್ಲಿನ ಸಂಸದರಾಗಿದ್ದ ನಳಿನ್ಕುಮಾರ್ ಕಟೀಲ್ ಒಂದೇ ಒಂದು ದಿನ ಜನಸಾಮಾನ್ಯರ ಪರವಾಗಿ ಮಾತನಾಡಿಲ್ಲ. ಮಂಗಳೂರು ವಿಮಾನ ನಿಲ್ದಾಣವನ್ನು ಖಾಸಗೀಕರಣ ಮಾಡಿದಾಗ, ವಿಜಯ ಬ್ಯಾಂಕ್ ವಿಲೀನಗೊಳಿಸಿದಾಗ, ಕಿದು ಸಿಪಿಸಿಆರ್ಐನ್ನು ಸ್ಥಳಾಂತರಗೊಳಿಸುವ ನಿರ್ಧಾರ ಮಾಡಿದಾಗ, ಬಿಎಸ್ಎನ್ಎಲ್ ಸಮಸ್ಯೆ ಎದುರಿಸಿದಾಗ ಒಂದೇ ಒಂದು ಬಾರಿಯೂ ನಳಿನ್ ಲೋಕಸಭೆಯಲ್ಲಿ ಧ್ವನಿ ಎತ್ತಿಲ್ಲ ಎಂದು ಟೀಕಿಸಿದರು.
ಈ ಬಾರಿಯ ಚುನಾವಣೆಯಲ್ಲಿ ಇಂತಹ ವಿಫಲ ಸಂಸದರನ್ನು ತಿರಸ್ಕರಿಸಿ ಎಲ್ಲ ದೃಷ್ಟಿಯಿಂದಲೂ ಒಳ್ಳೆಯ ಅಭ್ಯರ್ಥಿಯಾಗಿರುವ ಮಿಥುನ್ ರೈ ಅವರನ್ನು ಚುನಾಯಿಸಬೇಕೆಂದು ಮನವಿ ಮಾಡಿಕೊಂಡರು.