ಬಂಟ್ವಾಳ, ಆ 11 (DaijiworldNews/SM): ಪರಿಶಿಷ್ಟ ಜಾತಿ ಮತ್ತು ವರ್ಗದವರ ತಾಲೂಕು ಮಟ್ಟದ ಕುಂದುಕೊರತೆಗಳ ಸಭೆ ಬಂಟ್ವಾಳ ತಹಶಿಲ್ದಾರ್ ಬಿ.ಎಸ್.ಕೂಡಲಗಿ ಅವರ ಅಧ್ಯಕ್ಷತೆಯಲ್ಲಿ ತಾ.ಪಂ.ನ ಎಸ್.ಜಿ.ಎಸ್.ವೈ ಸಭಾಂಗಣದಲ್ಲಿ ನಡೆಯಿತು.
ತಾಲೂಕಿನಲ್ಲಿ ಒಟ್ಟು 39.22 ಎಕರೆ ಡಿ.ಸಿ.ಮನ್ನಾ ಜಾಗ ಕಾಯ್ದಿರಿಸಲಾಗಿದೆ ಎಂದು ತಾಲೂಕು ತಹಶಿಲ್ದಾರ್ ಬಿ.ಎಸ್.ಕೂಡಲಗಿ ಮಾಹಿತಿ ನೀಡಿದರು. ತಾಲೂಕಿನ ಯಾವ ಗ್ರಾಮದಲ್ಲಿ ಎಷ್ಟು ಜಾಗವನ್ನು ಕಾಯ್ದಿರಿಸಲಾಗಿದೆ ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಿದರು.
ಡಿ.ಸಿ.ಮನ್ನಾ ಜಾಗಕ್ಕೆ ಒಟ್ಟು 559 ಅರ್ಜಿಗಳು ಬಂದಿದ್ದು, ಕಂದಾಯ ಇಲಾಖೆಯಲ್ಲಿ 49 ಅರ್ಜಿಗಳು, ಕಂದಾಯ ನಿರೀಕ್ಷಕರ ಬಳಿ 149 ಅರ್ಜಿಗಳು ಬಾಕಿಯಾಗಿವೆ,ಉಳಿದಂತೆ ಎಲ್ಲವನ್ನು ವಿಲೇವಾರಿ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಪುದು ಗ್ರಾಮದ ಕುಮ್ಡೇಲು ಎಂಬಲ್ಲಿ ಇರುವ ಅಂಬೇಡ್ಕರ್ ಭವನ ಕಟ್ಟಡದಲ್ಲಿ ಅಂಬೇಡ್ಕರ್ ಕಾರ್ಯಕ್ರಮ ನಡೆಸಲು ಅವಕಾಶ ನೀಡದೆ ಇಲ್ಲಿನ ಪಿಡಿಒ ಅವರು ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದಾರೆ ಎಂದು ಸಭೆಯಲ್ಲಿ ದೂರಿದರು. ಈ ಸಂದರ್ಭದಲ್ಲಿ ಮಾತನಾಡಿದ ಪಿಡಿಒ ಅ ರೀತಿಯಲ್ಲಿ ನಾನು ಮಾಡಿಲ್ಲ ಎಂದು ಸಮಜಾಯಿಷಿ ನೀಡಲು ಮುಂದಾದಾಗ ಇವರು ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪ ಮಾಡಿದರು. ಮುಂದೆ ಈ ರೀತಿ ಆಗದಂತೆ ಜಾಗರೂಕತೆಯಿಂದ ಕರ್ತವ್ಯ ಮಾಡಿ ಎಂದು ತಹಶಿಲ್ದಾರ್ ಅವರು ಪಿ.ಡಿ.ಒ.ಗೆ ಸೂಚಿಸಿದರು.
ಜೊತೆಗೆ ಈ ಗ್ರಾಮದ ಕಾಲೋನಿಯ ಹೈಮಾಸ್ಕ್ ದೀಪಗಳು ಉರಿಯುತ್ತಿಲ್ಲ ಎಂದು ಪಿ.ಡಿ.ಒಗೆ ದೂರು ನೀಡಿದಾಗ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದು ಆರೋಪ ಮಾಡಿದರು.
ಗಂಗಾಕಲ್ಯಾಣ ಯೋಜನೆಯಡಿ ಕೊರೆಯಲಾಗುವ ಬೋರ್ ವೆಲ್ ನಲ್ಲಿ ಅವ್ಯಹಾರ ನಡೆಯುತ್ತಿದ್ದು, ಇದರ ಬಗ್ಗೆ ಮಾಹಿತಿ ಪಡೆಯಲು
ಅಂಬೇಡ್ಕರ್ ನಿಗಮದವರು ಸಭೆಗೆ ಹಾಜರಾಗದೆ ಇರುವುದರಿಂದ ನಾವು ಉತ್ತರ ಪಡೆಯಲು ಸಾಧ್ಯ ವಿದೆಯಾ? ಇಲಾಖೆಯರನ್ನು ಸಭೆಗೆ ಕರೆಸಿ ಎಂದು ಸಭೆಯಲ್ಲಿ ಒರ್ವರು ಒತ್ತಾಯ ಮಾಡಿದರು.
ಅರಳ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಟ ಮಾಡುವ ಬಗ್ಗೆ ಅನೇಕ ಬಾರಿ ದೂರು ನೀಡಿದರು ಯಾವುದೇ ಕ್ರಮಕೈಗೊಂಡಿಲ್ಲ ಎಂದು ಸತೀಶ್ ಅರಳ ಪ್ರಶ್ನಿಸಿದರು.
ಸಜೀಪ ಮುನ್ನೂರು ಗ್ರಾಮ ಕಂಡಕಂಡಲ್ಲಿ ಕಸ ಎಸೆಯಲಾಗುತ್ತಿದ್ದು, ಕೊಳೆತು ವಾಸನೆ ಬರುತ್ತಿದೆ.ಇದರ ಜೊತೆಗೆ ಕಸ ವಿಲೇವಾರಿಯಾಗದೆ ಇದ್ದ ಕಾರಣ ರೋಗದ ಭಯದಿಂದ ಇದ್ದೇವೆ. ಇದೇ ರೀತಿಯಲ್ಲಿ ಮುಂದುವರಿದರೆ ರೋಗದಿಂದ ನರಳುವ ದಿನಗಳು ದೂರವಿಲ್ಲ ಎಂದು ಅವರು ಕಳವಳ ವ್ಯಕ್ತಪಡಿಸಿದರು. ಈ ಬಗ್ಗೆ ಸ್ಪಷ್ಟನೆ ನೀಡಿದ ತಾ.ಪಂ.ಸಹಾಯಕ ನಿರ್ದೇಶಕ ದಿನೇಶ್ ಅವರು ಕಸ ವಿಲೇವಾರಿಗೆ ಸಂಬಂಧಿಸಿದಂತೆ ಗ್ರಾಮದಲ್ಲಿ ಮಾಹಿತಿ ಕಾರ್ಯಾಗಾರ ನಡೆಸುವುದು ಅಗತ್ಯವಿದೆ. ಈ ನಿಟ್ಟಿನಲ್ಲಿ ಯೋಚನೆ ಮಾಡಲಾಗಿದೆ.ಇದರ ಜೊತೆಗೆ ಸಂಜೀವಿನಿ ಸಂಘಗಳ ಮೂಲಕ ಮನೆಮನೆಗೆ ಬೇಟಿ ನೀಡಿ ಕಸ ಎಸೆಯದಂತೆ ಮತ್ತು ಅದರ ಪರಿಣಾಮದ ಬಗ್ಗೆ ಮಾಹಿತಿ ನೀಡುವ ಕೆಲಸ ಮಾಡುವ ಯೋಚನೆ ಮಾಡಿದ್ದೇವೆ ಎಂದು ಅವರು ಹೇಳಿದ್ದಲ್ಲದೆ ಈ ಗ್ರಾ.ಪಂ.ವ್ಯಾಪ್ತಿಯ ಸಮಸ್ಯೆ ಗಳ ಪರಿರಿಹಾರಕ್ಕೆ ಕ್ರಮಕೈಗೊಳ್ಳುವ ಬಗ್ಗೆ ಭರವಸೆ ನೀಡಿದರು.
ದ.ಕ.ಜಿಲ್ಲೆಯ ಬಂಟ್ವಾಳದಲ್ಲಿ ಚೆನ್ನ ದಾಸ ಜಾತಿಗೆ ಜಾತಿಪ್ರಮಾಣ ಪತ್ರ ನೀಡದೆ ಅಲೆದಾಡುವಂತೆ ಮಾಡಿದ್ದು ಯಾಕೆ,ಕಾರಣ ಏನು? ಇದಕ್ಕೆ ಉತ್ತರ ನೀಡುವವರು ಯಾರು ಎಂದು ಚೆನ್ನದಾಸ ಸಮುದಾಯದ ಸಂಘದ ಅಧ್ಯಕ್ಷ ರಾಜೇಂದ್ರ ದಾಸ್ ಪ್ರಶ್ನಿಸಿದರು. ಯಾರೋ ಒಬ್ಬಒಬ್ಬ ತಳ್ಳಿ ಅರ್ಜಿ ಹಾಕಿದ್ದಾನೆ ಎಂಬ ಕಾರಣಕ್ಕಾಗಿ ನೀವು ನಮ್ಮನ್ನು ಅಲೆದಾಡುವಂತೆ ಮಾಡುತ್ತೀರಾ? ನಮ್ಮ ಸಮುದಾಯದ ಮಕ್ಕಳು ಶಾಲೆಗೆ ಸೇರಬೇಕಾದರೆ ಪ್ರಮಾಣ ಪತ್ರ ಇಲ್ಲದೆ ಕಷ್ಟ ಆಗುತ್ತಿದೆ . ಸರಕಾರದ ಕಾನೂನು ಪ್ರಕಾರ ಏನು ಆಗಿದೆ ಅಪ್ರಕಾರ ನಮಗೆ ಜಾತಿ ಪ್ರಮಾಣ ಪತ್ರ ಕೊಡಿ, ಹಿಂದೆ ರಶ್ಮಿ ತಹಶಿಲ್ದಾರ್ ಅವರು ಇರುವಾಗ ಯಾವ ರೀತಿಯಲ್ಲಿ ಆಗುತ್ತಿತ್ತು ಅದೇ ಮಾದರಿಯಲ್ಲಿ ನಡೆಯಲಿ.ಇಲ್ಲದಿದ್ದರೆ ತಾಲೂಕು ಕಚೇರಿ ಮುಂಭಾಗದಲ್ಲಿ ಧರಣಿ ಕೂರುತ್ತೇವೆ.
ತಾ.ಪಂ.ಸಹಾಯಕ ನಿರ್ದೇಶಕ ದಿನೇಶ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸುನೀತಾ ಉಪಸ್ಥಿತರಿದ್ದರು