ಮಂಗಳೂರು, ಆ 11 (DaijiworldNews/HR): ಸೌಜನ್ಯ ಪ್ರಕರಣದಲ್ಲಿ ಸಿಬಿಐ ವರದಿ ಕೊಟ್ಟಾಗಿದೆ. ಆದರೆ ಈಗ ಸಾಕಷ್ಟು ಜನ ಇದರ ಮರು ತನಿಖೆಗೆ ಒತ್ತಾಯಿಸ್ತಾ ಇದ್ದಾರೆ. ಇದು ಸರ್ಕಾರದ ಮಟ್ಟದಲ್ಲಿದ್ದು, ಸರ್ಕಾರ ಮಾಹಿತಿ ತರಿಸಿಕೊಳ್ತಾ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಸೌಜನ್ಯ ಪ್ರಕರಣ ಮರು ತನಿಖೆ ಆಗ್ರಹ ವಿಚಾರದ ಕುರಿತು ಮಾತನಾಡಿದ ಅವರು, ನಾನು ಮರು ತನಿಖೆ ಮಾಡಿ ಅಥವಾ ಮಾಡಬೇಡಿ ಅಂತ ಹೇಳಲು ಹೋಗಲ್ಲ. ಇದರ ಆಧಾರಗಳ ಮಾಹಿತಿ ಬಂದ ನಂತರ ಗೃಹ ಸಚಿವರ ಜೊತೆ ಮಾತನಾಡ್ತೀನಿ. ಸರ್ಕಾರದ ಮಟ್ಟದಲ್ಲಿ ಮರು ತನಿಖೆ ಬಗ್ಗೆ ತೀರ್ಮಾನ ಆಗಲಿದೆ . ಸಿಎಂ ಮತ್ತು ಗೃಹ ಇಲಾಖೆ ಕೇಸ್ ಡಿಟೈಲ್ಸ್ ಬರಲಿ ಅಂತ ಹೇಳಿದ್ದಾರೆ. ಇದರ ತೀರ್ಮಾನ ಸರ್ಕಾರದ ಮಟ್ಟದಲ್ಲಿ ಆಗಬೇಕಿದೆ ಎಂದರು.
ಬಿಟ್ ಕಾಯಿನ್ ಪ್ರಕರಣದಲ್ಲಿ ಸಿಸಿಬಿ ಪೊಲೀಸರ ವಿರುದ್ದ ಎಫ್ ಐಆರ್ ವಿಚಾರದ ಕುರಿತು ಮಾತನಾಡಿದ ಅವರು, ಬಿಟ್ ಕಾಯಿನ್ ಹಗರಣ ಮುಚ್ಚಿ ಹಾಕಲು ಬಿಜೆಪಿ ಸರ್ಕಾರ ಪ್ರಯತ್ನಿಸಿದೆ. ಆಗಿನ ಸರ್ಕಾರ ಏನೇನು ಯತ್ನ ಮಾಡಿದೆ ಅಂತ ಗೊತ್ತಾಗ್ತಿದೆ. ತನಿಖೆ ಮಾಡಿದ ಪೊಲೀಸರೇ ಸಾಕ್ಷಿ ನಾಶ ಮಾಡ್ತಾರೆ ಅಂದ್ರೆ ಇದು ಉದಾಹರಣೆ ಅಷ್ಟೇ. ಎಸ್ಐಟಿ ಮಾಹಿತಿ ಆಧಾರದಲ್ಲಿ ಪೊಲೀಸರ ಮೇಲೆ ಕ್ರಮ ತೆಗೊಂಡಿದೆ. ತನಿಖೆ ಸರಿಯಾಗಿ ನಡೆಯಲಿ ಮತ್ತು ಸ್ಪಷ್ಟವಾಗಿ ನಡೆಯಲಿ. ಮೋಸ, ವಂಚನೆ ಮಾಡಿದವರು ಸಿಕ್ಕಾಕಿಕೊಂಡರೆ ಒಳ್ಳೆಯದು ಎಂದಿದ್ದಾರೆ.
ದ.ಕ ಬಿಜೆಪಿ ಶಾಸಕರಿಂದ ಹಕ್ಕುಚ್ಯುತಿ ಆರೋಪ ವಿಚಾರದ ಬಗ್ಗೆ ಬಗ್ಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಶಾಸಕರಿಗೆ ಹಕ್ಕು ಚ್ಯುತಿ ಆಗಬಾರದು ಅಂದಿದ್ದಾರೆ. ನಾವು ಎಲ್ಲರನ್ನೂ ಸರ್ಕಾರದಲ್ಲಿ ಸಮಾನವಾಗಿ ನೋಡ್ತೇವೆ. ಪ್ರಜಾಪ್ರಭುತ್ವದಲ್ಲಿ ಎಲ್ಲಾ ಜನ ಪ್ರತಿನಿಧಿಗಳಿಗೆ ಸಮಾನ ಗೌರವ ಇದೆ. ಶಿಷ್ಟಾಚಾರ ಪ್ರಕಾರವೇ ಆಮಂತ್ರಣ ಪತ್ರಿಕೆ ಸಿದ್ಧವಾಗುತ್ತದೆ. ಆದರೆ ಕೆಲವೊಮ್ಮೆ ಅವರಿಗೆ ಬೇಕಾದವರಿಗೆ ಆಹ್ವಾನ ಕೊಡ್ತಾರೆ, ವಿಶೇಷ ಅಹ್ವಾನಿತರು ಮಾಡ್ತಾರೆ. ಶಾಸಕರು, ಅಧಿಕಾರಿಗಳ ಹೆಸರು ಹಾಕಿ ಕಾರ್ಯಕ್ರಮ ಮಾಡಿದ್ರೆ ತೊಂದರೆ ಆಗಲ್ಲ. ಅವರಿಗೆ ಬೇಕಾದ ಹೆಸರು ಹಾಕಿಕೊಂಡರೆ ಸಮಸ್ಯೆ ಆಗುತ್ತೆ ಹಾಗಾಗಿ ನಾನೇ ಡಿಸಿಯವರಿಗೆ ಅಂಥದ್ದಕ್ಕೆ ಅವಕಾಶ ಕೊಡಬೇಡಿ ಅಂದಿದ್ದೇನೆ ಎಂದರು.
ಇನ್ನು ದ.ಕ ಜಿಲ್ಲೆಯಲ್ಲಿ ಪೈಪೋಟಿ ಹೆಚ್ಚಿದೆ ಹಾಗೂ ಸೂಕ್ಷ್ಮವಾಗಿದೆ. ಶಿಷ್ಟಾಚಾರ 100% ಪಾಲಿಸಿಕೊಂಡು ಮಾಡಿ ಅಂದಿದ್ದೇನೆ. ಯಾರ್ಯಾರ ಹೆಸರು ಹಾಕದಂತೆ ನಾನೇ ಸೂಚಿಸಿದ್ದೇನೆ. ಶಕ್ತಿ ಯೋಜನೆ ಉದ್ಘಾಟನೆಗೆ ಅಧ್ಯಕ್ಷತೆ ವಹಿಸಬೇಕಾದ ಶಾಸಕರೇ ಬಂದಿಲ್ಲ. ಅದು ಅನೌಪಚಾರಿಕವಾಗಿ ಆವತ್ತು ನಡೆದು ಹೋಗಿದೆ. ಶಿಷ್ಟಾಚಾರ ನಮ್ಮಿಂದಲೂ ತಪ್ಪಾಗಬಾರದು ಎಂದು ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರದ ವಿರುದ್ದ ಕಮಿಷನ್ ಆರೋಪ ವಿಚಾರದ ಬಗ್ಗೆ ಮಾತನಾಡಿ, ಸರ್ಕಾರ ಈಗ ತನಿಖೆ ಮಾಡಲು ಮುಂದಾಗಿದೆ. ಕೆಲಸ ಆಗದೇ ಬಿಲ್ ಗಳಾದ ಬಗ್ಗೆ, ಅನವಶ್ಯಕ ಕೆಲಸ, ಹೆಚ್ಚು ಹಣ ಪಡೆದ ಕೆಲಸಗಳ ಬಗ್ಗೆ ತನಿಖೆ, ಬೆಂಗಳೂರಿನ ರಸ್ತೆಗಳು, ಸಿವಿಲ್ ವಿಚಾರ ಮಾತ್ರವಲ್ಲ ಕಸದ ವಿಚಾರ ಕೂಡ ತನಿಖೆ, ಒಳ್ಳೊಳ್ಳೆ ಅಧಿಕಾರಿಗಳ ನೇತೃತ್ವದಲ್ಲಿ ಈ ತನಿಖೆ ನಡೀತಾ ಇದೆ. ನಿಷ್ಪಕ್ಷಪಾತವಾಗಿ ತನಿಖೆ ಮಾಡುವ ಅಧಿಕಾರಿಗಳ ತಂಡ ರಚನೆಯಾಗಿದೆ. ಗುತ್ತಿಗೆದಾರರಿಗೆ ಬಿಲ್ ಪಾವತಿ ಆಗದೇ ಇರೋದು ದೊಡ್ಡ ಸಮಸ್ಯೆ. ಆದರೆ ಅದು ಈಗಿನ ಸಮಸ್ಯೆ ಅಲ್ಲ, ಎರಡು ವರ್ಷದಿಂದ ಆಗಿಲ್ಲ. ಬಿಲ್ ಪಾವತಿಗೆ ತೊಂದರೆ ಇಲ್ಲ, ಆದರೆ ಕೆಲಸಗಳು ಆಗಿದ್ಯಾ ತನಿಖೆ ಆಗುತ್ತದೆ. ಮುಂದಿನ ಮೂವತ್ತು ದಿನಗಳ ಒಳಗಡೆ ವರದಿ ಸಿಗಲಿದ್ದು, ನ್ಯಾಯಯುತವಾಗಿ ಆದ ಕೆಲಸಗಳಿಗೆ ಬಿಲ್ ಪಾವತಿ ಆಗಲಿದೆ ಎಂದರು.
ಇನ್ನು ಕಳಪೆ ಮತ್ತು ಕೆಲಸ ಆಗದೇ ಇದ್ರೆ ನಾವು ಬಿಲ್ ಕೊಡಲ್ಲ. ಸಾರ್ವಜನಿಕರ ಹಣ ಅದು, ನಾವು ನೋಡಿ ಕೊಡ್ತೇವೆ. ಡಿಸಿಎಂ ವಿರುದ್ದ ಆರೋಪಕ್ಕೆ ಯಾವುದೇ ಹುರುಳಿಲ್ಲ. ಕೆಲವರು ಅನಾವಶ್ಯಕವಾಗಿ ಪ್ರಚಾರ ಮಾಡ್ತಾ ಇದ್ದಾರೆ. ನಮ್ಮ ಗ್ಯಾರಂಟಿ ಸ್ಕೀಮ್ ಜನರಿಗೆ ಮುಟ್ಟುತ್ತಿದೆ, ಅನುಕೂಲ ಆಗ್ತಾ ಇದೆ. ಜನರ ಅಭಿಪ್ರಾಯಕ್ಕೆ ಮಸಿ ಬಳಿಯಲು, ಕೆಟ್ಟ ಹೆಸರು ತರಲು ಈ ಆರೋಪ. ನಾವು ಅಥವಾ ಡಿಸಿಎಂ ಭ್ರಷ್ಟಾಚಾರ ತಡೆಯಲು ಪ್ರಯತ್ನ ಮಾಡ್ತಾ ಇದೀವಿ. ಆದರೆ ವಿರೋಧ ಪಕ್ಷ ದಾರಿ ತಪ್ಪಿಸಲು ಆಧಾರ ರಹಿತವಾಗಿ ಮಾತನಾಡ್ತಾ ಇದೆ ಎಂದು ವಾಗ್ದಾಳಿ ನಡೆಸಿದ್ದಾರೆ.