ಕುಂದಾಪುರ,ಏ05(AZM): ಆಯುಷ್ಮಾನ್ ಭಾರತದ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಅತ್ಯಂತ ಕಡು ಬಡವರಿಗೆ ಆರೋಗ್ಯ ಭವಿಷ್ಯ ನೀಡಿದ್ದಾರೆ. ಆದರೆ ರಾಜ್ಯ ಸರ್ಕಾರ ಮೋದಿಯವರ ಹೆಸರನ್ನು ಮರೆಮಾಚಿ ನಮ್ಮದೇ ಕಾರ್ಯಕ್ರಮ ಎಂದು ಬಿಂಬಿಸುತ್ತಿರುವುದು ನಾಚಿಕೆಗೇಡು ಎಂದು ಉಡುಪಿ ಚಿಕ್ಕಮಂಗಳೂರು ಲೋಕಸಭಾ ಅಭ್ಯರ್ಥಿ ಶೋಭಾ ಕರದ್ಲಾಂಜೆ ಇಂದು ಹೇಳಿದ್ದಾರೆ.
ಅವರು ಇಂದು ಕುಂದಾಪುರ ವಿಧಾನ ಸಭಾ ಕ್ಷೇತ್ರದ ಕೋಟೇಶ್ವರದ ವಾದಿರಾಜ ಕಲ್ಯಾಣಾ ಮಂಟಪದಲ್ಲಿ ಆಯೋಜಿಸಿದ ಕಾರ್ಯಕರ್ತರ ಸಭೆಯನ್ನು ಉದ್ಧೇಶಿಸಿ ಈ ಕುರಿತು ಮಾತನಾಡಿದರು. ಒಂದು ಕುಟುಂಬಕ್ಕೆ 5 ಲಕ್ಷ ರೂಪಾಯಿಗಳನ್ನು ವಾರ್ಷಿಕ ಆರೋಗ್ಯ ನಿಧಿ, ಕಿಸಾನ್ ಸಮ್ಮಾನ್ ಯೋಜನೆ, ಉಚಿತ ಗ್ಯಾಸ್ ಯೋಜನೆ, ಜನಧನ್ ಯೋಜನೆ, ಹೀಗೇ ನೂರಾರು ಯೋಜನೆಗಳನ್ನು ನರೇಂದ್ರ ಮೊದಿಯವರು ದೇಶದ ಜನರಿಗೆ ಒದಗಿಸಿದ್ದಾರೆ. ನಿರ್ಭಯ ಪ್ರಕರಣದ ಬಳಿಕ ಮಹಿಳೆಯರಿಗೆ ವಿಶೇಷ ರಕ್ಷಣೆಯ ಯೋಜನೆಯನ್ನು ಜಾರಿಗೆ ತರಲಾಗಿದೆ. ಆದರೆ ಬಿಜೆಪಿಯವರು ಏನು ಮಾಡಿದ್ದಾರೆ? ಸಂಸದರು ಏನು ಮಾಡಿದ್ದಾರೆ ಎನ್ನುವ ಅವಿವೇಕದ ಪ್ರಶ್ನೆಗಳನ್ನು ಕಾಂಗ್ರೆಸ್ ಕೇಳುತ್ತಿದೆ. ಇದಕ್ಕೆ ಪ್ರತ್ಯುತ್ತರವನ್ನು ಈ ಚುನಾವಣೆಯಲ್ಲಿ ಮತದಾರರು ಕೊಡಬೇಕಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಅಭ್ಯಥಿಗಳನ್ನು ಗೆಲ್ಲಿಸುವ ಮೂಲಕ ಮುಂದಿನ ಬಾರಿ ಮೋದಿ ನೇತೃತ್ವದ ಸರ್ಕಾರವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವ ಶಪಥ ಮಾಡಬೇಕು ಎಂದು ಹೇಳಿದರು.
ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಮಾತನಾಡಿ, ವಾಟ್ಸಾಪ್ಗಳಲ್ಲಿ ನಮ್ಮ ಅಭ್ಯರ್ಥಿಗಳು ಯಾವುದಕ್ಕೂ ಸಿಗುತ್ತಿಲ್ಲ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಕುಂದಾಪುರದ 64 ಗ್ರಾಮಗಳಲ್ಲಿ 1832 ವಾರ್ಡುಗಳಿವೆ. ಲೋಕ ಸಭಾ ಸದಸ್ಯರಾಗಿದ್ದವರಿಗೆ ಎಲ್ಲವನ್ನೂ ನೋಡಲು ಸಾಧ್ಯವಾಗದು. ಅದಕ್ಕಾಗಿಯೇ ಶಾಸಕರು, ಜಿಲ್ಲಾ ಪಮಚಾಯಿತಿ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಸದಸ್ಯರುಗಳಿದ್ದಾರೆ. ಅವರು ಆಯಾ ವಾರ್ಡಿನ ಸಮಸ್ಯೆಗಳನ್ನು ಗಮನಿಸಿ ಲೋಕಸಭಾ ಸದಸ್ಯರ ಗಮನಕ್ಕೆ ತರುತ್ತಾರೆ. ಹಾಗಾಗಿ ಶೋಭಾ ಕರಂದ್ಲಾಜೆ ಕ್ಷೇತ್ರಕ್ಕೆ ಬಂದಿಲ್ಲ ಎನ್ನುವ ಆರೋಪದಲ್ಲಿ ಹುರುಳಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂ, ಸದಸ್ಯರಾದ ಶ್ರೀಲತಾ ಸುರೇಶ್ ಶೆಟ್ಟಿ, ಲಕ್ಷ್ಮಿ ಮಂಜು ಬಿಲ್ಲವ, ಸದಾನಂದ ಬಳ್ಕೂರು, ಸಂಧ್ಯಾ ಪೈ, ರೂಪ ಪೈ, ವೈಲೆಟ್ ಬರೆಟ್ಟೊ, ಮಹಿಳಾ ಮೋರ್ಚ ಅಧ್ಯಕ್ಷೆ ಗುಣರತ್ನ, ಗೋಪಾಲ್ ಕಳಂಜೆ, ಸುಪ್ರಸಾದ್ ಶೆಟ್ಟಿ, ಗಣಪತಿ ಟಿ. ಶ್ರಿಯಾನ್ ಉಪಸ್ಥಿತರಿದ್ದರು.