ಉಡುಪಿ, ಆ 10(DaijiworldNews/MS): ಯುವತಿಯ ಮಾನಹಾನಿಯಾಗುವಂತೆ ವರ್ತಿಸಿದ್ದಆರೋಪಿಗೆ 3 ವರ್ಷ ಕಾರಾಗೃಹ ವಾಸ ಶಿಕ್ಷೆ ಮತ್ತು 10,000 ರೂ. ದಂಡ ವಿಧಿಸಿ,1ನೇ ಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶ ಶ್ಯಾಮ್ ಪ್ರಕಾಶ್ ಆದೇಶಿಸಿದ್ದಾರೆ.
ಉಡುಪಿಯ ಬೈಕಾಡಿ ಗ್ರಾಮದ ಗೋಪಾಲ ಹಾಗೂ ಪುತ್ತೂರು ಗ್ರಾಮದ ಬಾಲಕೃಷ್ಣ ಇವರುಗಳ ಪೈಕಿ ಆರೋಪಿ ಬಾಲಕೃಷ್ಣ ಮಣಿಪಾಲದ ದೂರದರ್ಶನ ಕಛೇರಿಯಲ್ಲಿ ನೌಕರನಾಗಿದ್ದು, ಅದೇ ಕಛೇರಿಯಲ್ಲಿರುವ ಪುರುಷ ಸಿಬ್ಬಂದಿಯೊಂದಿಗೆ , ಮಹಿಳಾ ಸಹೋದ್ಯೋಗಿ ಸಲುಗೆಯಿಂದ ಒಟ್ಟಿಗೆ ಇರುವ ವೇಳೆ, ಅವರಿಗೆ ತಿಳಿಯದಂತೆ, ಅವರ ಛಾಯಾಚಿತ್ರವನ್ನು ಮೊಬೈಲ್ನಲ್ಲಿ ತೆಗೆದು ಅದನ್ನು ಗೋಪಾಲನಿಗೆ ನೀಡಿದ್ದು, ಇವರಿಬ್ಬರೂ ಮಹಿಳೆಗೆ ಲೈಂಗಿಕ ಬೇಡಿಕೆ ಇಡುತ್ತಿದ್ದು, ಸದ್ರಿಯವರು ಇದಕ್ಕೆ ಒಪ್ಪದಿದ್ದಾಗ ಆರೋಪಿ ಗೋಪಾಲನು ಊರಿನಲ್ಲಿ ಅವರ ಅಶ್ಲೀಲ ಛಾಯಾಚಿತ್ರಗಳನ್ನು ತೋರಿಸಿ ಅವರ ಮಾನಕ್ಕೆ ಧಕ್ಕೆಯನ್ನು ಉಂಟು ಮಾಡಿರುತ್ತಾರೆ.
2014 ಜನವರಿ 4 ರಂದು ಈ ಇಬ್ಬರೂ ಆರೋಪಿಗಳು ತಕ್ಷೀರು ಮಾಡುವ ಸಮಾನ ಉದ್ದೇಶದಿಂದ ಸದ್ರಿ ಮಹಿಳೆಯ ಮನೆಯ ಸಮೀಪ ಬಾವಿಕಟ್ಟೆಯ ಬಳಿ ನಡೆದುಕೊಂಡು ಹೋಗುತ್ತಿದ್ದ ಈಕೆಯನ್ನು ತಡೆದು ನಿಲ್ಲಿಸಿ, ಅವರ ಮೇಲೆ ಲೈಂಗಿಕವಾಗಿ ಹಲ್ಲೆ ಮಾಡಿ, ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು ಲೈಂಗಿಕ ಸಂಪರ್ಕಕ್ಕೆ ಸಮ್ಮತಿ ನೀಡದಿದ್ದರೆ , ಅಶ್ಲೀಲ ಛಾಯಾಚಿತ್ರಗಳನ್ನು ಊರಿನವರಿಗೆ ತೋರಿಸಿ ಜೀವನ ಹಾಳು ಮಾಡುವುದಾಗಿ ಬೆದರಿಕೆ ಹಾಕಿರುವುದು ತಕ್ಷೀರು ಸ್ಥಳ ಪಂಚನಾಮೆ, ಸಾಕ್ಷಿದಾರರ ಹೇಳಿಕೆಯಿಂದ ಮತ್ತು ತನಿಖೆಯಿಂದ ಸಾಬೀತಾಗಿರುವುದರಿಂದ ಈ ಪ್ರಕರಣದ ಆರೋಪಿತರ ಪೈಕಿ 1ನೇ ಆರೋಪಿ ಗೋಪಾಲ ಮೃತಪಟ್ಟಿದ್ದು, 2ನೇ ಆರೋಪಿತನಾದ ಬಾಲಕೃಷ್ಣ ಇವರ ಮೇಲೆ ಭಾ.ದಂ.ಸA: ಕಲಂ: 341, 354, 354(ಎ), 354(ಸಿ), 354(ಡಿ), 504 ಜೊತೆಗೆ 34 ರಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಈ ಬಗ್ಗೆ ಮಲ್ಪೆ ಠಾಣೆಯ ಪಿ.ಎಸ್.ಐ ಗಿರಿಶ್ ಕುಮಾರ್ ಎಸ್ ತನಿಖೆ ನಡೆಸಿ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.ಪ್ರಕರಣದ ವಿಚಾರಣೆ ನಡೆದು ಆರೋಪ ಸಾಬೀತಾದ ಹಿನ್ನೆಲೆ, ನಗರದ 1ನೇ ಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶ ಶ್ಯಾಮ್ ಪ್ರಕಾಶ್ ಅವರು ಆರೋಪಿ ಬಾಲಕೃಷ್ಣನಿಗೆ 3 ವರ್ಷ ಕಾರಾಗೃಹ ವಾಸ ಶಿಕ್ಷೆ ಮತ್ತು 10,000 ರೂ. ದಂಡ ವಿಧಿಸಿ, ತೀರ್ಪು ನೀಡಿರುತ್ತಾರೆ.