ಮಂಗಳೂರು, ಆ 09 (DaijiworldNews/SM): ನಗರ ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಬೀದಿ ವ್ಯಾಪಾರ ಮಾಡದೆ ಪಾಲಿಕೆ ಸೂಚಿಸಿದ ಜಾಗದಲ್ಲೇ ವ್ಯಾಪಾರ ನಡೆಸುವಂತೆ ಪಾಲಿಕೆ ಸೂಚಿಸಿದೆ.
ಉದ್ದಿಮೆ ಪರವಾನಗಿ ಪಡೆಯದೇ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 60 ವಾರ್ಡ್ಗಳಲ್ಲಿ ಕಾನೂನು ಬಾಹಿರವಾಗಿ ರಸ್ತೆ ಬದಿಯಲ್ಲಿ ಹಾಗೂ ಫುಟ್ ಪಾತ್ಗಳಲ್ಲಿ ಬೀದಿ-ಬದಿ ವ್ಯಾಪಾರಸ್ಥರು ಅನಧಿಕೃತವಾಗಿ ಅಂಗಡಿಗಳು, ಗೂಡಂಗಡಿ ಮೂಲಕ ಇತರೆ ವ್ಯಾಪಾರ ವಹಿವಾಟುಗಳನ್ನು ಎಲ್ಲೆಂದರಲ್ಲಿ ನಡೆಸುತ್ತಿರುವುದರಿಂದ ಸಾರ್ವಜನಿಕರಿಗೆ, ಪಾದಚಾರಿಗಳಿಗೆ ಓಡಾಡಲು ಹಾಗೂ ವಾಹನ ಸವಾರನಿಗೆ ರಸ್ತೆತಡೆ ಉಂಟಾಗಿ ತೊಂದರೆಯಾಗುತ್ತಿರುವ ಬಗ್ಗೆ ದೂರುಗಳು ಬಂದಿವೆ.
ಈ ವಾರ್ಡ್ಗಳಲ್ಲಿ ಕೇವಲ ತಳ್ಳುಗಾಡಿಗಳಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಅವರು ಯಾವುದೇ ತಿನಿಸುಗಳನ್ನು ತಯಾರಿಸಬಾರದು ಅನಧಿಕೃತವಾಗಿ ಬೀದಿ-ಬದಿ ವ್ಯಾಪಾರಸ್ಥ ಮಾಡಬಾರದು. ಅವರಿಗೆ ಪಾಲಿಕೆಯು ಗುರುತಿಸಿರುವ ವೆಂಡರ್ ಝೋನ್ ಸ್ಥಳಗಳಲ್ಲಿ ಮಾತ್ರ ವ್ಯಾಪಾರ ನಡೆಸಲು ಅನುಮತಿ ನೀಡಲಾಗಿದೆ ಎಂದು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.