ಮಣಿಪಾಲ, ಆ 04 (DaijiworldNews/SM): ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿಗಳು ಇತ್ತೀಚೆಗೆ ಉಡುಪಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಣಿಪಾಲದಲ್ಲಿ ನಡೆಯುವ ಅಕ್ರಮ ಪಬ್ ಮತ್ತು ಗಾಂಜಾ ವ್ಯವಹಾರದ ಬಗ್ಗೆ ಗಮನ ಸೆಳೆಯುವ ಒಂದು ಮನವಿಯನ್ನು ಉಡುಪಿ ಕಾಂಗ್ರೆಸ್ ಪಕ್ಷದ ನಿಯೋಗದಿಂದ ನೀಡಲಾಯಿತು.
ಅದರ ಮುಂದುದರಿದ ಹಂತವಾಗಿ ಮಣಿಪಾಲ ಪೊಲೀಸ್ ಸ್ಟೇಶನ್ ನ ಇನ್ಸ್ಪೆಕ್ಟರ್ ಶ್ರೀ ದೇವರಾಜ್ ಮತ್ತು ಸಬ್ ಇನ್ಸ್ಪೆಕ್ಟರ್ ಶ್ರೀ ಅಬ್ದುಲ್ ಖಾದರ್ ಅವರನ್ನು ಕಾಂಗ್ರೆಸ್ ಪಕ್ಷದ ನಿಯೋಗ ಭೇಟಿಯಾಗಿ ಮಣಿಪಾಲದಲ್ಲಿ ಪಬ್ ಮತ್ತು ಗಾಂಜಾ ವಿಚಾರದಲ್ಲಿ ನಡೆಯುವ ವ್ಯವಹಾರ ಮತ್ತು ನಿಯಮ ಮೀರಿ ಮಧ್ಯರಾತ್ರಿ ನಂತರ ಕೂಡ ನಡೆಯುತ್ತಿರುವ ವಿಧ್ಯಾರ್ಥಿಗಳ ಮತ್ತು ಹೊರಗಿನಿಂದ ಬಂದ ಯುವಕರ ಅಕ್ರಮ ಚಟುವಟಿಕೆಗಳಿಗೆ ಬೆಂಬಲ ನೀಡುವ ಯಾವುದೇ ಶಕ್ತಿ ಇರಬಹುದು ಅದನ್ನು ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಯಿತು.
ರಾತ್ರಿ ಹೊತ್ತು ಮಣಿಪಾಲದಲ್ಲಿ ಕಲಿಯುವ ವಿದ್ಯಾರ್ಥಿಗಳು ಮಾತ್ರವಲ್ಲದೆ, ಮಂಗಳೂರು ಮತ್ತು ಇತರ ಸ್ಥಳೀಯ ವಿಧ್ಯಾರ್ಥಿ ಮತ್ತು ಯುವಕ ಯುವತಿಯರು ಕೂಡ ಪಬ್ ಗಳಲ್ಲಿ ಇರುವುದು ಸ್ಥಳೀಯ ಜನರ ಆತಂಕಕ್ಕೆ ಮೂಲ ಕಾರಣ .
ಯುವ ಸಮಾಜವು ಜಾಗೃತರಾಗಿ ಸಮಾಜದ ಸುಧಾರಣೆಗೆ ಮುಂದಾಗಬೇಕು ಎಂಬ ವಿಧಾರ ಕೇಳಿಬರುತ್ತಿರುವ ಸಮಯದಲ್ಲಿ ವಿಧ್ಯಾರ್ಥಿಗಳು ಗಾಂಜಾ ಮತ್ತು ಮಾದಕವಸ್ತುಗಳಿಗೆ ಬಲಿಯಾಗುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ ಎಂಬುದು ತೀವ್ರ ಕಳವಳಕಾರಿ ವಿಚಾರ.
ಮಣಿಪಾಲದ ಕಾನೂನು ಸುವ್ಯವಸ್ಥೆ ಬಗ್ಗೆ ತೀವ್ರ ನಿಗಾ ಇರಿಸಲಾಗುವುದು ಮತ್ತು ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ಗಾಂಜಾ ಡ್ರಗ್ಸ್ ಲಾಭಿಗೆ ಮಣಿಯುವ ಪ್ರಶ್ನೆ ಇಲ್ಲ ಎಂಬ ಭರವಸೆಯನ್ನು ಪೊಲೀಸ್ ನಿರೀಕ್ಷಕರಾದ ದೇವರಾಜ್ ಉಡುಪಿ ಕಾಂಗ್ರೆಸ್ ನಿಯೋಗಕ್ಕೆ ತಿಳಿಸಿದರು .ನಿಯೋಗದಲ್ಲಿ ಇಂದ್ರಾಳಿ ಕುಶಾಲ್ ಶೆಟ್ಟಿ , ಸದಾಶಿವ ಅಮೀನ್ ಕಟ್ಟೆ ಗುಡ್ಡೆ, ಕೀರ್ತಿ ಶೆಟ್ಟಿ ಅಂಬಲಪಾಡಿ, ಸುಕೇಶ್ ಕುಂದರ್ ಹೆರ್ಗ , ಭರತ್ ಮಣಿಪಾಲ, ಚಂದ್ರ ಮೋಹನ್ ಚಿಟ್ಪಾಡಿ, ಸುರೇಂದ್ರ ಆಚಾರ್, ಅರುಣ್ ಶೆಟ್ಟಿ , ಸದಾನಂದ್ ಮಣಿಪಾಲ ಮುಂತಾದವರು ಉಪಸ್ಥಿತರಿದ್ದರು