ಮಂಗಳೂರು, ಆ 09(DaijiworldNews/MS): ಕರ್ಣಾಟಕ ಬ್ಯಾಂಕ್ನ ಮಾಜಿ ಆಡಳಿತ ನಿರ್ದೇಶಕ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿದ್ದ ಪಿ.ಜಯರಾಮ ಭಟ್ ನಿಧನರಾಗಿದ್ದಾರೆ.
2009ರ ಕರ್ನಾಟಕ ಬ್ಯಾಂಕ್ ನಲ್ಲಿ ಅಧಿಕಾರ ವಹಿಸಿಕೊಂಡಿದ್ದು ಮೂರು ಅವಧಿಗೆ ಬ್ಯಾಂಕ್ ನಾಯಕತ್ವ ವಹಿಸಿದ್ದರು.
ಇವರ ಅವಧಿಯಲ್ಲಿ ಇ-ಲಾಬಿ, ಮೊಬೈಲ್ ಬ್ಯಾಂಕಿಂಗ್, ಪಿಒಎಸ್, ಆನ್ಲೈನ್ ಟ್ರೇಡಿಂಗ್ ಅಕೌಂಟ್, ಟ್ರಾವೆಲ್ ಕಾರ್ಡ್, ಗಿಫ್ಟ್ ಕಾರ್ಡ್ ಮುಂತಾದ ಯಶಸ್ವಿ ಯೋಜನೆಗಳನ್ನು ಪರಿಚಯಿಸಿ ಗ್ರಾಹಕರಿಂದ ಭಾರೀ ಮೆಚ್ಚುಗೆ ಗಳಿಸಿದ್ದು ಮಾತ್ರವಲ್ಲದೇ ಅವರ ಆಡಳಿತ ಅವಧಿಯಲ್ಲಿ ಕರ್ಣಾಟಕ ಬ್ಯಾಂಕ್ ಸರ್ವಾಂಗೀಣ ಪ್ರಗತಿ ಕಂಡಿತ್ತು.
ಜಯರಾಮ್ ಭಟ್ ಅವರಿಗೆ ಅತ್ಯುತ್ತಮ ಮ್ಯಾನೇಜರ್ ಅವಾರ್ಡ್, ಅತ್ಯುತ್ತಮ ಸಾಧಾನಾ ಪ್ರಶಸ್ತಿ, ಮಣಿಪಾಲ ವಿವಿಯಿಂದ 2015ರ ಹೊಸ ವರ್ಷದ ಪ್ರಶಸ್ತಿ ಪಡೆದುಕೊಂಡಿದ್ದರು.
ಹಿನ್ನಲೆ:
ಮೂಲತಃ ಪೊಳಲಿಯವರಾದ ಭಟ್ ಅವರು 1972 ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂಎಸ್ಸಿಯನ್ನು ಪ್ರಥಮ ರ್ಯಾಂಕ್ನೊಂದಿಗೆ ಪೂರ್ಣಗೊಳಿಸಿದರು. CAIIB ಪರೀಕ್ಷೆಯಲ್ಲಿ ಯಶಸ್ವಿಯಾದ ನಂತರ, ಅವರು 1972 ರಲ್ಲಿ ಮೂರು ತಿಂಗಳ ಕಾಲ ಮುಲ್ಕಿಯ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು. ಬಳಿಕ 1973 ರಲ್ಲಿ ಪ್ರೊಬೇಷನರಿ ಅಧಿಕಾರಿಯಾಗಿ ಕರ್ಣಾಟಕ ಬ್ಯಾಂಕ್ ಲಿಮಿಟೆಡ್ಗೆ ಸೇರಿ ಬ್ಯಾಂಕಿಂಗ್ ಕ್ಶೇತ್ರದಲ್ಲಿ ಅವರ ವೃತ್ತಿಜೀವನ ಪ್ರಾರಂಭಿಸಿದರು
1976 ರಲ್ಲಿ ಅವರು ಶಾಖೆಯ ವ್ಯವಸ್ಥಾಪಕರಾಗಿ ಭಡ್ತಿ ಪಡೆದು ಇದಾದ ಬಳಿಕ 14 ವರ್ಷಗಳ ಕಾಲ ವಿವಿಧ ಶಾಖೆಗಳಲ್ಲಿ ಸೇವೆ ಸಲ್ಲಿಸಿದರು. ಅವರು 1993 ರಲ್ಲಿ ಬ್ಯಾಂಕಿನ ಮುಖ್ಯ ಕಛೇರಿಯಲ್ಲಿ ಮುಖ್ಯ ಅಕೌಂಟೆಂಟ್ ಆಗಿ ಬಡ್ತಿ ಪಡೆದರು. ನಂತರ ಸಹಾಯಕ ಜನರಲ್ ಮ್ಯಾನೇಜರ್ ಮತ್ತು ಡೆಪ್ಯುಟಿ ಜನರಲ್ ಮ್ಯಾನೇಜರ್ ಆಗಿ ನೇಮಕಗೊಂಡರು ಮತ್ತು 2005 ರಲ್ಲಿ ಮುಖ್ಯ ಜನರಲ್ ಮ್ಯಾನೇಜರ್ ಹುದ್ದೆಗೆ ಏರಿದ್ದರು