ಉಳ್ಳಾಲ, ಆ 08 (DaijiworldNews/HR): ಗ್ರಾಮ ಪಂಚಾಯತ್ ಎರಡನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಉಳ್ಳಾಲ ತಾಲೂಕಿನ 17 ಗ್ರಾಮಗಳಿಗೆ ಇಂದಿನಿಂದ ಚುನಾವಣೆ ನಡೆಯಲಿದ್ದು, ಆ. 17ರ ಒಳಗಾಗಿ ಎಲ್ಲಾ ಪಂಚಾಯತ್ ನಲ್ಲಿ ನೂತನ ಅಧ್ಯಕ್ಷ ಉಪಾಧ್ಯಕ್ಷರು ಅಧಿಕಾರ ಸ್ವೀಕರಿಸಲಿದ್ದು, ಎಲ್ಲಾ 17 ಗ್ರಾಮಗಳಿಗೆ 6 ಮಂದಿ ಚುನಾವಣಾಧಿಕಾರಿಗಳನ್ನು ದ.ಕ. ಜಿಲ್ಲಾಧಿಕಾರಿ ನೇಮಕ ಮಾಡಿದ್ದಾರೆ.
ಉಳ್ಳಾಲ ತಾಲೂಕಿನ ಕೊಣಾಜೆ ಗ್ರಾಮದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಆ.8ರಂದು ಚುನಾವಣೆ ನಡೆಯಲಿದ್ದು, ಕಳೆದ ಬಾರಿ ಮೀಸಲಾತಿಯಿಂದ ಅಧ್ಯಕ್ಷ ಸ್ಥಾನದ ಅವಕಾಶ ಕಳೆದುಕೊಂಡಿದ್ದ ಬಿಜೆಪಿಗೆ ಈ ಬಾರಿ ಸ್ಪಷ್ಟ ಬಹುಮತದಿಂದ ಅಧ್ಯಕ್ಷ , ಉಪಾಧ್ಯಕ್ಷ ಸ್ಥಾನವನ್ನು ಪಡೆದುಕೊಳ್ಳಲಿದೆ. ಉಳಿದಂತೆ ಮುನ್ನೂರು ಗ್ರಾಮದಲ್ಲಿ ಅಧ್ಯಕ್ಷ ಸ್ಥಾನ ಕಾಂಗ್ರೆಸ್ ಮತ್ತು ಉಪಾಧ್ಯಕ್ಷ ಸ್ಥಾನ ಸಿಪಿಐಎಂ ಹಂಚಿಕೊಳ್ಳುವ ಮಾತುಕತೆ ನಡೆದಿದ್ದು, ಪಾವೂರಿನಲ್ಲಿ ಎಸ್ ಡಿಪಿಐ ಮತ್ತು ಪಕ್ಷೇತರರ ಹೊಂದಾಣಿಕೆಯೊಂದಿಗೆ ಆಡಳಿತ ನಡೆಸುವ ಸಾಧ್ಯತೆ ಇದೆ.
ಇನ್ನು ಉಳಿದಂತೆ ತಲಪಾಡಿ, ಸಜಿಪ ಪಡು/ ಚೇಳೂರು, ಕೊಣಾಜೆ ಬಿಜೆಪಿ ತೆಕ್ಕೆಯಲ್ಲಿದ್ದರೆ ಉಳಿದ ಎಲ್ಲಾ ಗ್ರಾಮ ಪಂಚಾಯತ್ ನಲ್ಲಿ ಕಾಂಗ್ರೆಸ್ ಬಹುಮತವಿದ್ದು ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ನಿಚ್ಚಳವಾಗಿದೆ.
ಆಕಾಂಕ್ಷಿಗಳ ಸಂಖ್ಯೆ ಹೆಚ್ಚಳ:
ಪ್ರತೀ ಗ್ರಾಮ ಪಂಚಾಯತ್ ನಲ್ಲಿ ಬಹುಮತ ಇರುವ ಪಕ್ಷಗಳ ಸದಸ್ಯರಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಸಾಮಾನ್ಯ ಮತ್ತು ಹಿಂದುಳಿದ ವರ್ಗ ಅ. ಮೀಸಲಾತಿ ಇರುವಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಳವಾಗಿದೆ. ಪಕ್ಷದೊಳಗೆ ಆಂತರಿಕ ಚುನಾವಣೆ ನಡೆದು ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಅನುಸೂಚಿತ ಜಾತಿ ಮೀಸಲಾತಿ ಇರುವಲ್ಲಿ ಅವಿರೋಧವಾಗಿ ಆಯ್ಕೆ ಆಗಲಿದೆ.
ಚುನಾವಣಾಧಿಕಾರಿ ನೇಮಕ:
ಉಳ್ಳಾಲ ತಾಲೂಕಿನ ಅಂಬ್ಲಮೊಗರು, ಮುನ್ನೂರು, ಬೆಳ್ಮ ಗ್ರಾಮ ಪಂಚಾಯತ್ ಗೆ ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಯ ಉಪ ನಿರ್ದೇಶಕ ರವಿ ನಾಯ್ಕ್, ಬೋಳಿಯಾರು, ಹರೇಕಳ, ಪಾವೂರು ಗ್ರಾಮಗಳಿಗೆ ಮಂಗಳೂರು ತಾಲೂಕು ಭೂ ದಾಖಲೆಗಳ ಸಹಾಯಕ ನಿರ್ದೇಶಕ ಗೋಪಾಲ್, ಪಜೀರು, ಕುರ್ನಾಡು, ಕೊಣಾಜೆ ಗ್ರಾಮಗಳಿಗೆ ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ದಿಲಿಪ್ ಕುಮಾರ್, ಮಂಜನಾಡಿ, ಬಾಳೆಪುಣಿ, ನರಿಂಗಾನ ಗ್ರಾಮಗಳಿಗೆ ಮಂಗಳೂರು ಉಪ ವಿಭಾಗ ಲೋಕೋಪಯೋಗಿ ಇಲಾಖೆಯ ಗುಣಮಟ್ಟ ಮೌಲ್ಯ ಮಾಪನ ವಿಭಾಗದ ಸಹಾಯಕ ಕಾರ್ಯಪಾಲ ಅಭಿಯಂತರ ಸ್ವಾಮಿ ಕೋಟ್ರೇಶಿ, ಇರಾ, ಸಜಿಪಪಡು, ಸಜಿಪ ನಡು ಗ್ರಾಮಗಳಿಗೆ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಜಿನೇಂದ್ರ ಕೋಟ್ಯಾನ್, ಕಿನ್ಯಾ ಮತ್ತು ತಲಪಾಡಿ ಗ್ರಾಮಗಳಿಗೆ ಶಿಶು ಅಭಿವೃದ್ದಿ ಯೋಜನಾಧಿಕಾರಿ ಶ್ವೇತಾ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ.