ಮಂಗಳೂರು, ಆ 06 (DaijiworldNews/SM): ರೋಹನ್ ಕಾರ್ಪೊರೇಷನ್ ಮತ್ತು ಫೆರ್ನಾಂಡಿಸ್ ಗ್ರೂಪ್ ವತಿಯಿಂದ ಮೆಗಾ ಪ್ರಾಪರ್ಟಿ ಶೋ ಮತ್ತು ಗ್ರ್ಯಾಂಡ್ ವಿಲ್ಫಿ ನೈಟ್ ಅನ್ನು ಇಸ್ರೇಲ್ನಲ್ಲಿ ಆಗಸ್ಟ್ 5ರ ಶನಿವಾರದಂದು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಕೆ.ಪಿ. ಜಗದೀಶ್ ಅಧಿಕಾರಿ, ರೋನ್ಸ್ ಲಂಡನ್, ಕಿಶೂ ಬಾರ್ಕೂರ್ ಮತ್ತು ಜೇಮ್ಸ್ ಮೆಂಡೋನ್ಸಾ ದುಬೈ ಸೇರಿದಂತೆ ಮಂಗಳೂರ ಸಮುದಾಯದ ಗೌರವಾನ್ವಿತ ವ್ಯಕ್ತಿಗಳು ಸಮಾರಂಭದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದರು. ಲೀನಾ ಫೆರ್ನಾಂಡಿಸ್, ವಿಲ್ಸನ್ ಫೆರ್ನಾಂಡಿಸ್, ಬೆನ್ನಿ ಬೇನಿಯಮ್, ಫಾ. ಸಂತೋಷ್ ಲೋಬೋ, ವಿಶ್ವಾಸ್ ರೆಬಿಂಬಸ್, ವಾಲೇಸ್ ಫೆರ್ನಾಂಡಿಸ್ ಮತ್ತು ರುಚಿ ಫೆರ್ನಾಂಡಿಸ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಔಪಚಾರಿಕವಾಗಿ ಸಭಾ ಕಾರ್ಯಕ್ರಮ ನಡೆಸಲಾಯಿತು. ಬಳಿಕ ಗ್ರ್ಯಾಂಡ್ ವಿಲ್ಫಿ ನೈಟ್ ಕಾರ್ಯಕ್ರಮ ಇಸ್ರಾಯೆಲ್ ನಲ್ಲಿ ಕೊಂಕಣಿ, ತುಳು ಭಾಷೆಯ ಕಂಪನ್ನು ಪಸರಿಸಿತು.
ಗಾಯಕರಾದ ವಿಶ್ವಾಸ್ ರೆಬಿಂಬಸ್, ರಥನ್ ಕ್ಯಾಸ್ಟೆಲಿನೋ, ಅಶ್ವಿನ್ ಡಿ'ಕೋಸ್ಟಾ, ವೆಲಿಟಾ ಲೋಬೋ, ಜೋಯಲ್ ಡಿಸೋಜಾ, ಪ್ರಕಾಶ್ ಫೆರ್ನಾಂಡಿಸ್ ಮತ್ತು ಗಣೇಶ್ ಬಾಬು ಅವರು ಹಾಡಿದ ಹಲವಾರು ಹಿಟ್ ಕೊಂಕಣಿ ಹಾಡುಗಳು ಸಂಗೀತದ ರಸದೌತನ ನೀಡಿತು.
ಸುಪ್ರಸಿದ್ಧ ಸಂಗೀತ ಜೋಡಿ ಪಪ್ಪನ್ ಹಾಗೂ ಜೋಸ್ವಿನ್ ಕಾರ್ಯಕ್ರಮಕ್ಕೆ ಸಂಗೀತ ಒದಗಿಸಿದರು. ವಿಲ್ಫಿ ನೈಟ್ ಪ್ರದರ್ಶನವನ್ನು ಖ್ಯಾತ ಕಲಾವಿದ ವಿಶ್ವಾಸ್ ರೆಬಿಂಬಸ್ ಅವರು ಪರಿಕಲ್ಪನೆಯೊಂದಿಗೆ ವಿನ್ಯಾಸಗೊಳಿಸಲಾಗಿತ್ತು. ಕಾರ್ಯಕ್ರಮದ ವಿಶೇಷವೆಂಬಂತೆ, ಕರಾವಳಿ ಕರ್ನಾಟಕದ ಮನರಂಜನಾ ಜಗತ್ತಿನಲ್ಲಿ ಹೊಸ ಮೈಲಿಗಲ್ಲು ಸೃಷ್ಠಿಸಿರುವ ಪ್ರೈವೆಟ್ ಚಾಲೆಂಜ್ ಮೂಲಕ ಮನೆ ಮಾತಾಗಿರುವ ಆಧುನಿಕ ಕಾಲದ ಅತ್ಯಂತ ಮನೋರಂಜನೆಯ ಜೋಡಿ, ನಟ ಅರವಿಂದ ಬೋಳಾರ್ ಮತ್ತು ದೈಜಿವರ್ಲ್ಡ್ ಮಾಧ್ಯಮದ ಸಂಸ್ಥಾಪಕ ವಾಲ್ಟರ್ ನಂದಳಿಕೆ ವೇದಿಕೆ ಏರಿ ಹಾಸ್ಯದ ಮೂಲಕ ಮನೋರಂಜಿಸಿದರು.
ಹೆಸರಾಂತ ಸಂಗೀತಗಾರರಾದ ಡೋನಿ ಮತ್ತು ಆಶಾ ಕೊರಿಯಾ ಕಾರ್ಯಕ್ರಮವನ್ನು ನಿರೂಪಿಸಿದರು. ದೈಜಿವರ್ಲ್ಡ್ ಮಾರ್ಕೇಟಿಂಗ್ ಮ್ಯಾನೇಜರ್ ಪ್ರವೀಣ್ ತಾವ್ರೊ ಸಮಾರಂಭದಲ್ಲಿ ಭಾಗವಹಿಸಿದ್ದರು.