ಕಾಸರಗೋಡು, ಆ 06 (DaijiworldNews/SM): ಅಮೃತ್ ಭಾರತ್ ನಿಲ್ದಾಣ ಯೋಜನೆಯಡಿ ಕಾಸರಗೋಡು ರೈಲ್ವೇ ನಿಲ್ದಾಣದ ನವೀಕರಣ ಕಾಮಗಾರಿಯ ಶಿಲಾನ್ಯಾಸವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಆನ್ ಲೈನ್ ಮೂಲಕ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ರೈಲ್ವೆ ವಲಯದಲ್ಲಿ ಹೊಸ ಅಧ್ಯಾಯ ಆರಂಭಿಸಲಾಗಿದೆ. ದೇಶದ ೫೮ ರೈಲು ನಿಲ್ದಾಣಗಳು ಅಭಿವೃದ್ಧಿಯ ಪರ್ವಕ್ಕೆ ತಲಪಿದೆ. ಸಣ್ಣ ನಗರದ ರೈಲು ನಿಲ್ದಾಣಗಳ ಅಭಿವೃದ್ಧಿ ಯಿಂದ ಸಾಮಾನ್ಯ ಜನರು, ಕೃಷಿಕರಿಗೆ ಲಾಭವಾಗಲಿದೆ. ರೈಲ್ವೆ ಹಳಿ ಮತ್ತು ಸಣ್ಣ ಪಟ್ಟಣಗಳ ರೈಲ್ವೆ ನಿಲ್ದಾಣಗಳ ಅಭಿವೃದ್ಧಿ ಪ್ರಮುಖವಾಗಿದೆ ಎಂದು ಪ್ರಧಾನಿ ಹೇಳಿದರು. ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅಧ್ಯಕ್ಷತೆ ವಹಿಸಿದ್ದರು. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಸುಮಾರು 24.53 ಕೋಟಿ ರೂ. ವೆಚ್ಚದಲ್ಲಿ ಕಾಸರಗೋಡು ನಿಲ್ದಾಣ ಅಭಿವೃದ್ಧಿ ನಡೆಯುತ್ತಿದೆ. ಹಲವು ಮೂಲಭೂತ ವ್ಯವಸ್ಥೆಗಳು ಇದರಲ್ಲಿ ಒಳಗೊಂಡಿದೆ ಎಂದು ಸಂಸದರು ಹೇಳಿದರು. ತಿರುವನಂತಪುರ ದಿಂದ ಕಣ್ಣೂರು ತನಕ ಕೊನೆಗೊಳ್ಳುವ ಜನ ಶತಾಬ್ದಿ ಎಕ್ಸ್ ಪ್ರೆಸ್, ಆಲಪ್ಪುಯ ಕಣ್ಣೂರು ಎಕ್ಸಿಕ್ಯೂಟಿವ್ ಎಕ್ಸ್ ಪ್ರೆಸ್ ಕಾಸರಗೋಡು ತನಕ ವಿಸ್ತರಿಸುವ ಬಗ್ಗೆ ಪ್ರಯತ್ನ ನಡೆಯುತ್ತಿದೆ ಎಂದು ಸಂಸದರು ಹೇಳಿದರು.
ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಶಿಲಾಫಲಕವನ್ನು ಅನಾವರಣ ಗೊಳಿಸಿದರು. ಶಾಸಕ ಎನ್ . ಎ ನೆಲ್ಲಿಕುನ್ನು ಉಪಸ್ಥಿತರಿದ್ದರು. ಸಮಾರಂಭದಲ್ಲಿ ರೈಲ್ವೆ ಅಧಿಕಾರಿಗಳು, ಸಿಬಂದಿಗಳು, ಜನಪ್ರತಿನಿಧಿಗಳು ಮೊದಲಾದವರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಪಾಲಕ್ಕಾಡ್ ರೈಲ್ವೇ ವಲಯ ಅಡಿಷನಲ್ ಡಿವಿಜನ್ ಮೆನೇಜರ್ ಡಾ . ಸಕೀರ್ ಹುಸೈನ್ ಸ್ವಾಗತಿಸಿ , ಪಾಲಕ್ಕಾಡ್ ವಲಯ ಡಿವಿಶನಲ್ ಇಲೆಕ್ಟ್ರಿಕಲ್ ಇಂಜಿನಿಯರ್ ಟ್ರಾಕ್ಷನ್ ಸಂದೀಪ್ ಜೋಸೆಫ್ ವಂದಿಸಿದರು.