ಕಾಪು, ಏ 05 (MSP): ಕಳೆದ ಲೋಕಸಭಾ ಚುನಾವಣೆಯ ವೇಳೆ ಪ್ರಧಾನಿ ನರೇಂದ್ರ ಮೋದಿಯರಿಗೆ ನಾವು ಮತ ನೀಡಿದ ಪರಿಣಾಮವಾಗಿ ದೇಶಕ್ಕೆ ವಿಶೇಷ ಗೌರವ ಬರುವಂತಾಗಿದೆ. ನಾವು ಯಾವ ನಂಬಿಕೆಯ ಆಧಾರದಲ್ಲಿ ಮತ ನೀಡಿದ್ದೇವೆಯೋ ಆ ನಂಬಿಕೆಯನ್ನು ಮೋದಿ ಉಳಿಸಿಕೊಂಡಿದ್ದಾರೆ. ನಮ್ಮ ನಂಬಿಕೆಗೆ ದ್ರೋಹ ಬಗೆಯದ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸುವುದು ನಮ್ಮ ಕರ್ತವ್ಯವಾಗಿದೆ. ಅದಕ್ಕಾಗಿ ಮತ್ತೊಮ್ಮೆ ಮೋದಿ ಎಂಬ ಘೋಷಣೆಯೊಂದಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ನಾವೆಲ್ಲರೂ ಬಿಜೆಪಿಯನ್ನು ಬೆಂಬಲಿಸಬೇಕಾಗಿದೆ ಎಂದು ಬಿಜೆಪಿ ಮುಖಂಡೆ ಚಿತ್ರನಟಿ ಶೃತಿ ಹೇಳಿದರು. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರ ಪರವಾಗಿ ಮತಯಾಚನೆಗಾಗಿ ಕಾಪು ಕ್ಷೇತ್ರ ಬಿಜೆಪಿಯ ವತಿಯಿಂದ ಸಿದ್ಧಪಡಿಸಲಾದ ಪ್ರಚಾರ ರಥಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ನನಗೆ ಭಾರತೀಯಳು ಎನ್ನಲು ಎಷ್ಟು ಹೆಮ್ಮೆಯಾಗುತ್ತದೆಯೋ ಬಿಜೆಪಿಯವಳು ಎನ್ನಲು ಕೂಡಾ ಅಷ್ಟೇ ಹೆಮ್ಮೆಯಾಗುತ್ತಿದೆ. ಯಾಕೆಂದರೆ ನಾನು ಬಿಜೆಪಿಗೆ ಮತ ನೀಡಿದ್ದೇನೆ. ನಮ್ಮ ಮತಪಡೆದು ಅಧಿಕಾರಕ್ಕೆ ಬಂದ ಮೋದಿ ನೇತೃತ್ವದ ಕೇಂದ್ರ ಸರಕಾರ ಯಾವುದೇ ರೀತಿಯ ಭ್ರಷ್ಟಾಚಾರವಿಲ್ಲದೇ ಸುಲಲಿತವಾದ ಆಡಳಿತ ನೀಡಿದೆ. ಈ ಬಾರಿ ನಾವು ಮೋದಿಯವರಿಗೆ ಶಕ್ತಿ ತುಂಬೋಣ. ಮೋದಿ ಗೆಲ್ಲಿಸುವ ಮತಗಳಲ್ಲಿ ನಮ್ಮ ಮತವೂ ಇರುವಂತಾಗಲಿ ಎಂದು ಆಶಿಸಿದರು.
ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಮಾತನಾಡಿ, ಕಾಪು ಕ್ಷೇತ್ರದಲ್ಲಿ ಬಿಜೆಪಿ ಬಲಿಷ್ಠವಾಗಿದೆ. ಹಿಂದಿನ ಲೋಕಸಭಾ ಚುನಾವಣೆ ಮತ್ತು ವಿಧಾನಸಭಾ ಚುನಾವಣೆ ಹಾಗೂ ಅದರ ನಡುವೆ ನಡೆದ ಬಹುತೇಕ ಚುನಾವಣೆಗಳಲ್ಲಿ ಬಿಜೆಪಿ ಎಲ್ಲಾ ಹಂತದಲ್ಲೂ ಮುನ್ನಡೆ ಸಾಽಸುತ್ತಾ ಬಂದಿದೆ. ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಎಲ್ಲಾ ಕ್ಷೇತಗಳಿಗಿಂತಲೂ ಹೆಚ್ಚಿನ ಮತಗಳಿಂದ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸುವುದು ನಮ್ಮ ಜವಾಬ್ದಾರಿಯಾಗಿದೆ. ಅದಕ್ಕಾಗಿ ಪ್ರತಿಯೋರ್ವ ಕಾರ್ಯಕರ್ತನೂ ಶ್ರಮಿಸಬೇಕಿದೆ ಎಂದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುರೇಶ್ ಶೆಟ್ಟಿ ಗುರ್ಮೆ ಮಾತನಾಡಿ, ಇದು ಧರ್ಮ ಮತ್ತು ಅಧರ್ಮಗಳ ನಡುವಿನ ಚುನಾವಣೆಯಾಗಿದೆ. ಭಾರತವನ್ನು ವಿಶ್ವಗುರುವನ್ನಾಗಿಸಿದ ಮೋದಿಯವರನ್ನು ಮಹಾಘಟಬಂಧನ್ ಹೆಸರಿನಲ್ಲಿ ಕಟ್ಟಿ ಹಾಕುವ ಪ್ರಯತ್ನ ನಡೆಯುತ್ತಿದೆ. ಅಶ್ವಮೇಧ ಯಾಗ ಕುದುರೆಯನ್ನು ಯಾವ ರೀತಿಯಲ್ಲಿ ಕಟ್ಟುವುದು ಅಸಾಧ್ಯವೋ ? ಅದೇ ರೀತಿಯಲ್ಲಿ ಮೋದಿ ಮತ್ತು ಬಿಜೆಪಿಯನ್ನು ಕಟ್ಟಿ ಹಾಕುವುದು ಕೂಡಾ ಅಸಾಧ್ಯವಾಗಿದೆ. ಇದನ್ನು ಶ್ರುತಗೊಳಿಸುವ ಜವಾಬ್ದಾರಿ ನಮ್ಮದಾಗಿದೆ ಎಂದರು.
ಕಾಪು ಕ್ಷೇತ್ರ ಬಿಜೆಪಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ನಯನಾ ಗಣೇಶ್, ಮಹಿಳಾ ಮೋರ್ಚಾ ಕ್ಷೇತ್ರಾಧ್ಯಕ್ಷೆ ಕೇಸರಿ ಯುವರಾಜ್, ಯುವ ಮೋರ್ಚಾ ಅಧ್ಯಕ್ಷ ಪ್ರವೀಣ್ ಪೂಜಾರಿ, ಪುರಸಭೆ ವ್ಯಾಪ್ತಿ ಬಿಜೆಪಿ ಅಧ್ಯಕ್ಷ ಸಂದೀಪ್ ಶೆಟ್ಟಿ, ಜಿ.ಪಂ. ಸದಸ್ಯೆ ಗೀತಾಂಜಲಿ ಸುವರ್ಣ, ಪುರಸಭೆ ವಿಪಕ್ಷ ನಾಯಕ ಅರುಣ್ ಶೆಟ್ಟಿ ಪಾದೂರು, ಸದಸ್ಯರಾದ ಕಿರಣ್ ಆಳ್ವ, ಅನಿಲ್ ಕುಮಾರ್, ಸುಧಾ ರಮೇಶ್ ಪೂಜಾರಿ, ರಮಾ ವೈ. ಶೆಟ್ಟಿ, ಮೋಹಿನಿ ಶೆಟ್ಟಿ, ವಿಜಯ ಕರ್ಕೇರ, ಎಲ್ಲೂರು ಗ್ರಾ.ಪಂ. ಅಧ್ಯಕ್ಷೆ ವಸಂತಿ ಮಧ್ವರಾಜ್, ಬಿಜೆಪಿ ಮುಖಂಡರಾದ ಸಂತೋಷ್ ಸುವರ್ಣ ಬೊಳ್ಜೆ, ಗಿರಿಧರ್ ಶೆಣೈ, ನವೀನ್ ಎಸ್.ಕೆ., ಸುಧಾಮ ಶೆಟ್ಟಿ, ಸಚಿನ್ ಬೊಳ್ಜೆ, ಸತೀಶ್ ಉದ್ಯಾವರ, ಗುರುಪ್ರಸಾದ್ ಶೆಟ್ಟಿ, ಕಮಲಾಕ್ಷ ಸುವರ್ಣ, ಶಿವಪ್ರಸಾದ್ ಶೆಟ್ಟಿ, ಗೋಪ ಪೂಜಾರಿ, ಚಂದ್ರ ಮಲ್ಲಾರು, ಪವಿತ್ರಾ ಆರ್. ಶೆಟ್ಟಿ, ಇಂದಿರಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.