ಉಡುಪಿ, ಆ 05 (DaijiworldNews/MS): ಪ್ರಪಂಚದಾದ್ಯಂತ ಪ್ರಸಿದ್ಧಿಯನ್ನು ಪಡೆದಿರುವ ಕಲ್ಮಾಡಿ ವೆಲಂಕಣಿ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವವು ಆಗಸ್ಟ್ 15 ರಂದು ವಿಜೃಂಭಣೆಯಿಂದ ಜರಗಲಿದೆ.
ವೆಲಂಕಣಿ ಮಾತೆಯ ಪ್ರತಿಮೆಯನ್ನು ತಮಿಳುನಾಡಿನ ವೆಲಂಕಣಿ ಪುಣ್ಯಕ್ಷೇತ್ರದಿಂದ ತಂದು ಕಲ್ಮಾಡಿಯ ಸ್ಟೆಲ್ಲಾ ಮಾರಿಸ್ ದೇವಾಲಯದಲ್ಲಿ ಅಗಸ್ಟ್ 15, 1988 ರಲ್ಲಿ ಅಂದಿನ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾಗಿದ್ದ ಅತೀ ವಂದನೀಯ ಡಾ. ಬಾಸಿಲ್ ಡಿʼಸೋಜಾ ರವರು ಪ್ರತಿಷ್ಠಾಪಿಸಿದರು. ಅಂದಿನಿಂದ ಇಂದಿನವರೆಗೂ ವೆಲಂಕಣಿ ಮಾತೆಯ ಸ್ಮರಣೆ ನಿರಂತರವಾಗಿ ಈ ಕೇಂದ್ರದಲ್ಲಿ ನಡೆಯುತ್ತಿದೆ ಹಾಗೂ ಪ್ರತಿದಿನ ಹಲವಾರು ಭಕ್ತಾದಿಗಳು ಇಲ್ಲಿಗೆ ಭೇಟಿ ನೀಡುತ್ತಿದ್ದು ಅನೇಕ ಪವಾಡಗಳಿಗೆ ಸಾಕ್ಷಿಯಾಗಿದ್ದಾರೆ.
ಸ್ಟೆಲ್ಲಾ ಮಾರಿಸ್ ದೇವಾಲಯ ಕಲ್ಮಾಡಿ ಇಲ್ಲಿರುವ ವೆಲಂಕಣಿ ಮಾತೆಯ ಕೇಂದ್ರವನ್ನು 15 ಅಗಸ್ಟ್ 2022 ರಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ. ಜೆರಾಲ್ಡ್ ಐಸಾಕ್ ಲೋಲೋ ರವರು ಉಡುಪಿ ಧರ್ಮಪ್ರಾಂತ್ಯದ ಅಧಿಕೃತ ಪುಣ್ಯಕ್ಷೇತ್ರವಾಗಿ ಘೋಷಿಸಿದರು.
ಪ್ರತಿ ವರ್ಷದಂತೆ ಈ ಬಾರಿ ಕೂಡ ವೆಲಂಕಣಿ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವವು 15 ಅಗಸ್ಟ್ 2023 ಮಂಗಳವಾರ ದಂದು ನಡೆಯಲಿರುವುದು.
ವೆಲಂಕಣಿ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವಕ್ಕೆ ಪೂರ್ವಭಾವಿಯಾಗಿ ಒಂಬತ್ತು ದಿನಗಳ ನವೇನಾ ಪ್ರಾರ್ಥನೆಗಳುಆಗಸ್ಟ್ 06 ರಿಂದ 14 ರ ವರೆಗೆ ಸಾಯಂಕಾಲ 4:00 ಗಂಟೆಗೆ ನಡೆಯಲಿರುವುದು.
ಆಗಸ್ಟ್ 06 ಭಾನುವಾರದಂದು ಸಾಯಂಕಾಲ 3:45 ಗಂಟೆಗೆ ಉಡುಪಿ ಧರ್ಮಪ್ರಾಂತ್ಯದ ವಿಕಾರ್ ಜೆರಾಲ್ ಆಗಿರುವ ಮೊನ್ಸಿ. ಫರ್ಡಿನಾಂಡ್ ಗೊನ್ಸಾಲ್ವಿಸ್ ರವರು ನವೇನಾ ಪ್ರಾರ್ಥನೆಗಳಿಗೆ ಚಾಲನೆ ನೀಡಲಿರುವರು.
ಆಗಸ್ಟ್ 13 ಭಾನುವಾರದಂದು ಮಧ್ಯಾನ್ಹ 2:30 ಗಂಟೆಗೆ ಆದಿಉಡುಪಿ ಜಂಕ್ಷನ್ ನಿಂದ ಕಲ್ಮಾಡಿ ದೇವಾಲಯದ ವರೆಗೆ ವೆಲಂಕಣಿ ಮಾತೆಯ ಮೂರ್ತಿಯ ಮೆರವಣಿಗೆ ನಡೆಯಲಿರುವುದು. ಅಂದು ಮಂಗಳೂರು ಧರ್ಮಪ್ರಾಂತ್ಯದ ನಿವೃತ್ತ ಧರ್ಮಾಧ್ಯಕ್ಷರಾಗಿರುವ ಅತೀ ವಂದನೀಯ ಡಾ ಲುವಿಸ್ ಪಾವ್ಲ್ ಡಿʼಸೋಜಾ ರವರು ವೆಲಂಕಣಿ ಮಾತೆಯ ಮೂರ್ತಿಯ ಮೆರವಣಿಗೆ ಚಾಲನೆ ನೀಡಲಿರುವರು.
15 ಅಗಸ್ಟ್ 2023 ಮಂಗಳವಾರ ದಂದು ಬೆಳಗ್ಗೆ 10:00 ಗಂಟೆಗೆ ದಿವ್ಯ ಬಲಿಪೂಜೆಯನ್ನು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಡಾ ಜೆರಾಲ್ಡ್ ಐಸಾಕ್ ಲೋಬೊ ನೆರೆವೇರಿಸಲಿರುವರು. ಉಡುಪಿ ಧರ್ಮಪ್ರಾಂತ್ಯದ ಅನೇಕ ಧರ್ಮಗುರುಗಳು ಹಾಗೂ ಸಾವಿರಾರು ಭಕ್ತಾದಿಗಳು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವರು. ಅಂದು ಮಧ್ಯಾಹ್ನ 2:00 ಗಂಟೆಗೆ, 4:00 ಗಂಟೆಗೆ ಹಾಗೂ ಸಾಯಂಕಾಲ 6:00 ಗಂಟೆಗೆ ಕೊಂಕಣಿ ಭಾಷೆಯಲ್ಲಿ ಇತರೆ ಬಲಿಪೂಜೆಗಳನ್ನು ಆಯೋಜಿಸಲಾಗಿದೆ.
ಫಾದರ್ ಬ್ಯಾಪ್ಟಿಸ್ಟ್ ಮಿನೇಜಸ್, ರೆಕ್ಟರ್ ವೆಲಂಕಣಿ ಮಾತೆಯ ಪುಣ್ಯಕ್ಷೇತ್ರ ಕಲ್ಮಾಡಿ, ಐಡಾ ಡಿಸೋಜಾ,ಉಪಾಧ್ಯಕ್ಷೆ ಚರ್ಚ್ ಪಾಲನಾ ಸಮಿತಿಯ ಸ್ಟ್ಯಾನಿ ಮಿನೇಜಸ್, ಕಾರ್ಯದರ್ಶಿ ಮತ್ತು ದೇವಪ್ರಜೆ ವತಿಯಿಂದ ವಾರ್ಷಿಕ ಹಬ್ಬ ಮತ್ತು ನೊವೆನಾ ಪ್ರಾರ್ಥನೆಗಾಗಿ ಎಲ್ಲಾ ಭಕ್ತರನ್ನು ಆತ್ಮೀಯವಾಗಿ ಸ್ವಾಗತಿಸಿದ್ದಾರೆ.