ಬ್ರಹ್ಮಾವರ,ಆ 05 (DaijiworldNews/MS): ಬ್ರಹ್ಮಾವರದಲ್ಲಿ ನೂತನ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ ಸ್ಥಾಪನೆಯಾಗುತ್ತಿರುವುದು ಬ್ರಹ್ಮಾವರ ತಾಲೂಕಿನ ಜನತೆಗೆ ಸಂತಸದ ವಾತಾವರಣವನ್ನು ನಿರ್ಮಿಸಿದೆ. ಕೊನೆಗೂ ಜನರೆಲ್ಲರ ಆಸೆ ಈಡೇರಿದ್ದು, ಜನಸಾಮಾನ್ಯರಿಗೆ ನ್ಯಾಯದಾನ ಇನ್ನೂ ಹತ್ತಿರವಾಗಿದೆ.
ಆರೂರು ಸುಕೇಶ್ ಶೆಟ್ಟಿ
ತುಳುವರ ರಾಜಾಧಾನಿಯಾದ 365 ದೇವಸ್ಥಾನವಿದ್ದ ಐತಿಹಾಸಿಕ ಸ್ಥಳ ಬಾರಕೂರು, ಅತ್ಯಂತ ಹಳೆಯ ಬಂದರು ಆಗಿ ಇತಿಹಾಸ ಹೊಂದಿದ ಹಂಗಾರುಕಟ್ಟೆ, ಇಂತಹ ಹಲವಾರು ವೈಶಿಷ್ಟ್ಯಗಳನ್ನು, ಪ್ರವಾಸಿ ತಾಣಗಳನ್ನು, ಪುಣ್ಯಕ್ಷೇತ್ರಗಳನ್ನು ಹೊಂದಿದ ಬ್ರಹ್ಮಾವರ ಎಂಬ ದೊಡ್ಡ ತಾಲೂಕಿನಲ್ಲಿ ನ್ಯಾಯಾಲಯವು ಅತೀ ಅಗತ್ಯವಾಗಿದ್ದು, ಈ ಹಿಂದೆ ಗ್ರಾಮೀಣ ಪ್ರದೇಶದ ಜನರು ಕುಂದಾಪುರ, ಉಡುಪಿಗೆ ಅಲೆದಾಡುವ ಪರಿಸ್ಥಿತಿ ಇತ್ತು. ತೀರಾ ಒಳಭಾಗದ ಗ್ರಾಮೀಣ ಜನರು ಉಡುಪಿ, ಕುಂದಾಪುರ ನ್ಯಾಯಾಲಯಕ್ಕೆ ಹೋಗಿ ಬರಲು ಹರ ಸಾಹಸ ಪಡುತ್ತಿದ್ದು, ಬೇರೆಯವರನ್ನು ಅವಲಂಬಿತರಾಗಿ ಹೋಗಿ ಬರುವ ಅನಿವಾರ್ಯ ಈ ಹಿಂದೆ ಇತ್ತು. ಈ ಬ್ರಹ್ಮಾವರ ತಾಲೂಕಿನ ಈ ಹಿಂದೆ ಅತೀ ಹೆಚ್ಚು ಪ್ರಕರಣಗಳು ಉಡುಪಿ ಮತ್ತು ಕುಂದಾಪುರ ನ್ಯಾಯಾಲಯಗಳಲ್ಲಿ ಹಂಚಿ ದಾಖಲಾಗುತ್ತಿದ್ದು, ಇದೀಗ ಜನರಿಗೆ ಒಂದೇ ಕಡೇ ನ್ಯಾಯದ ಮೊರೆ ಹೋಗಲಿಕ್ಕೆ ಅನುಕೂಲಕರವಾಗಿದೆ.
ಅತೀ ದೊಡ್ಡ ನ್ಯಾಯವ್ಯಾಪ್ತಿ ಹೊಂದಿದ ಬ್ರಹ್ಮಾವರ ತಾಲೂಕಿನಲ್ಲಿ ಇದೀಗ ಹೊಸ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ ಸ್ಥಾಪನೆಯಾಗುತ್ತಿರುವುದು ಬ್ರಹ್ಮಾವರ ತಾಲೂಕಿನ ಜನರಲ್ಲಿ ತೃಪ್ತ ಮನೋಭಾವ ಮೂಡಿದೆ ಎನ್ನುತ್ತಾರೆ ವಕೀಲರಾದ ಆರೂರು ಸುಕೇಶ್ ಶೆಟ್ಟಿ.