ಬೆಳ್ತಂಗಡಿ, ಆ 05 (DaijiworldNews/AK):ಟೆಲಿಗ್ರಾಂ ಮೂಲಕ ನಕಲಿ ಖಾತೆಯಿಂದ ಶಿಕ್ಷಕಿಗೆ ಬೆದರಿಕೆ ಹಾಕಿ ಒಂದು ಲಕ್ಷ ರೂ. ವಸೂಲಿ ಮಾಡಿ ವಂಚನೆ ಎಸಗಿರುವ ಆರೋಪಿಯನ್ನು ವೇಣೂರು ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿ ಬೆಳ್ತಂಗಡಿ ತಾಲೂಕಿನ ಸುಲ್ಕೇರಿ ಗ್ರಾಮದ ಅಂಟ್ರಿಂಜ ನಿವಾಸಿ ಅಶ್ವತ್ ಹೆಬ್ಬಾರ್ (23 ) ಎಂದು ಗುರುತಿಸಲಾಗಿದೆ. ಬೆಳ್ತಂಗಡಿ ತಾಲೂಕಿನ ಸುಲ್ಕೇರಿ ಗ್ರಾಮದ ನಿವಾಸಿ, ಪೆರೋಡಿತ್ತಾಯಕಟ್ಟೆ ಶಾಲೆಯ ಶಿಕ್ಷಕಿ ಜ್ಯೋತಿ ಎಂಬವರಿಗೆ ನಕಲಿ ಟೆಲಿಗ್ರಾಂ ಖಾತೆ ಬಳಸಿ ಮೂರು ಲಕ್ಷ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದ. ಹಣ ನೀಡದೆ ಹೋದಲ್ಲಿ ಪತಿಗೆ ಜೀವಹಾನಿ ಮಾಡುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ.
ಈ ಬಗ್ಗೆ ಜ್ಯೋತಿ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ವೇಣೂರು ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕಿ ಸೌಮ್ಯ ಜೆ., ಆನಂದ ಎಂ. ನೇತೃತ್ವದ ಪೊಲೀಸರ ತಂಡ ಆ.2ರಂದು ಮಧ್ಯರಾತ್ರಿ ತೆಂಕಕಾರಂದೂರು ಗ್ರಾಮದ ಗುಂಡೇರಿ ಬಳಿ ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿ ಮೂರು ಲಕ್ಷ ರೂ. ಬೇಡಿಕೆ ಇಟ್ಟಿದ್ದ ಬಳಿಕ ಒಂದು ಲಕ್ಷ ರೂ. ನೀಡುವುದಾಗಿ ಆರೋಪಿಯನ್ನು ಟೆಲಿಗ್ರಾಂನಲ್ಲಿ ಒಪ್ಪಿಸಿದಂತೆ ಆರೋಪಿ ಆ.2 ರಂದು ಸಂಜೆ ಅಳದಂಗಡಿ ಕೆದ್ದು ಸಮೀಪ ಹಣ ಎಸೆದು ಹೋಗಲು ಸೂಚಿಸಿದ್ದ. ಹೀಗೆ ಮೂರ್ನಾಲ್ಕು ಬಾರಿ ಸ್ಥಳವನ್ನು ಬದಲಾಯಿಸುತ್ತಾ ಸಂದೇಶದಲ್ಲೆ ವ್ಯವಹರಿಸುತ್ತಿದ್ದ ಆರೋಪಿ ಶಿರ್ಲಾಲು ಸವಣಾಲು ಕ್ರಾಸ್ ಬಳಿ ಹಣವನ್ನು ವಾಹನದಿಂದ ಎಸೆದು ಹೋಗುವಂತೆ ಸೂಚಿಸಿದ್ದ ಅದರಂತೆ ಹಣದ ಬ್ಯಾಗನ್ನು ಎಸೆದು ಹೋಗಿದ್ದರು. ದ್ವಿಚಕ್ರ ವಾಹನದಲ್ಲಿ ಬಂದ ಆರೋಪಿ ಹಣದ ಪ್ಯಾಕನ್ನು ಪಡೆಯುವಷ್ಟರಲ್ಲಿ ಕಾದು ಕುಳಿತಿದ್ದ ಪೊಲೀಸರು ಹಿಡಿಯಲು ಯತ್ನಿಸಿದ್ದಾರೆ.
ಆದರೆ ಅಲ್ಲಿ ತಪ್ಪಿಸಿಕೊಂಡಿದ್ದ ಆರೋಪಿ ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದ, ಬಳಿಕ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ತಡರಾತ್ರಿ ಆತನ ಅಣ್ಣನ ಮನೆ ಗುಂಡೇರಿ ಸಮೀಪ ಆರೋಪಿ ವಸೂಲಿ ಮಾಡಿದ್ದ ಒಂದು ಲಕ್ಷ ರೂ. ನಗದು, ಕೃತ್ಯಕ್ಕೆ ಉಪಯೋಗಿಸಿದ ಬೈಕನ್ನು ವಶಕ್ಕೆ ಪಡೆದು ಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನ ವಿಧಿಸಲಾಗಿದೆ.