ಬೆಳ್ತಂಗಡಿ, ಆ 05 (DaijiworldNews/MS): ಉಜಿರೆಯಲ್ಲಿ ನಡೆದ ಧರ್ಮಸ್ಥಳ ಕ್ಷೇತ್ರದ ಭಕ್ತರ ಪ್ರತಿಭಟನೆಯಲ್ಲಿ ಸೌಜನ್ಯಾ ಪೋಷಕರಿಗೆ ಹಲ್ಲೆಗೆ ಯತ್ನಿಸಿದ ಬಗ್ಗೆ ದೂರು ದಾಖಲಾಗಿದೆ.
ಅಪರಿಚಿತ ವ್ಯಕ್ತಿ ಹಾಗೂ ಇತರರು ತನ್ನ ಮೈಗೆ ಕೈ ಹಾಕಿ ಮಾನಹಾನಿಗೆ ಯತ್ನಿಸಿದ್ದು ಹಾಗೂ ತನ್ನ ಮಗನಿಗೆ ಹಲ್ಲೆ ನಡೆಸಿದ ಬಗ್ಗೆ ಸೌಜನ್ಯ ತಾಯಿ ಕುಸುಮಾವತಿ (48) ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ತನ್ನ ಮಗಳು ಸೌಜನ್ಯಾ 11 ವರ್ಷಗಳ ಹಿಂದೆ ಅತ್ಯಾಚಾರಕ್ಕೊಳಗಾಗಿ ಹತ್ಯೆಯಾಗಿದ್ದು, ಕೃತ್ಯದ ನೈಜ ಆರೋಪಿಗಳನ್ನು ಪತ್ತೆ ಹಚ್ಚಿ ಶಿಕ್ಷೆಗೊಳಪಡಿಸುವಂತೆ ನಾನು 11 ವರ್ಷದಿಂದ ಹೋರಾಟ ನಡೆಸುತ್ತಿದ್ದೇನೆ., ಅದೇ ಉದ್ದೇಶದಿಂದ ಆ. 4ರಂದು ಉಜಿರೆಯಲ್ಲಿ ಸಭೆಯೊಂದನ್ನು ಆಯೋಜಿಸಿರುವುದನ್ನು ತಿಳಿದು ನ್ಯಾಯಕ್ಕಾಗಿ ಕುಟುಂಬದೊಂದಿಗೆ ತೆರಳಿದ್ದೆ. ಈ ಸಂದರ್ಭ ಅಪರಿಚಿತ ವ್ಯಕ್ತಿಗಳು, ಇತರರೊಂದಿಗೆ ಸೇರಿಕೊಂಡು ತನ್ನನ್ನು ತಡೆದು ಮಾನಹಾನಿಗೆ ಯತ್ನಿಸಿದ್ದಲ್ಲದೆ, ತನ್ನ ಮಗನ ಕೊರಳಪಟ್ಟಿ ಹಿಡಿದು ಹಲ್ಲೆ ನಡೆಸಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಈ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ