ಬಂಟ್ವಾಳ, ಆ 04 (DaijiworldNews/SM): ಪರವಾನಿಗೆಯನ್ನು ದುರುಪಯೋಗಪಡಿಸಿ ಕೊಡ್ಯಮಲೆ ರಕ್ಷಿತಾರಣ್ಯದಿಂದ ಅಕ್ರಮವಾಗಿ ಮರವನ್ನು ಕಡಿದು ಖಾಸಗಿ ಮರದ ಮಿಲ್ ವೊಂದಕ್ಕೆ ಸಾಗಿಸಿರುವ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಬಿ.ಸಿ.ರೋಡಿನ ಗಾಣದಪಡ್ಪುವಿನಲ್ಲಿರುವ ಬಂಟ್ವಾಳ ವಲಯ ಅರಣ್ಯಾಧಿಕಾರಿ ಕಚೇರಿ ಮುಂಭಾಗದಲ್ಲಿ ಬಂಟ್ವಾಳ ಕ್ಷೇತ್ರ ಬಿಜೆಪಿ ಯುವಮೋರ್ಚಾ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಯಿತು.
ದೇವಶ್ಯಪಡೂರು ಗ್ರಾಮದ ಕುಂಟಾಲ್ ಪಲ್ಕೆ ಎಂಬಲ್ಲಿ ಪ್ಲಾಂಟೇಷನ್ ಮಾಡುವ ಉದ್ದೇಶದಿಂದ ಆಗಸ್ಟ್ 1 ರಂದು ಕೊಡ್ಯಮಲೆ ಕಾಡಿನಿಂದ ಮರವನ್ನು ಕಡಿಯಲು ನಾವೂರಿನ ವ್ಯಕ್ತಿಯೋರ್ವನಿಗೆ ಅರಣ್ಯ ಇಲಾಖೆ ಪರವಾನಿಗೆ ನೀಡಿದೆ.
ಅರಣ್ಯಾಧಿಕಾರಿ ಶಾಮೀಲು ?
ಆದರೆ ಆತ ಜು.31 ರಂದೇ ಅಕ್ರಮವಾಗಿ ಮರವನ್ನು ಕಡಿದು ತನ್ನ ಸ್ವಂತ ಮರದ ಮಿಲ್ ಗೆ ಸಾಗಿಸಿದ್ದಾನೆ.ಇದಕ್ಕೆ ಬಂಟ್ವಾಳ ವಲಯಾರಣ್ಯಾಧಿಕಾರಿ ಹಾಗೂ ಸಿಬ್ಬಂದಿಗಳು ಅತನೊಂದಿಗೆ ಶಾಮೀಲಾಗಿ ಅತನ ವಿರುದ್ಧ ಕೇಸು ದಾಖಲಿಸದೆ ರಕ್ಷಿಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿ,
ಕಾಂಗ್ರೆಸ್ ಸರಕಾರ ಮತ್ರು ಅರಣ್ಯಾಧಿಕಾರಿಯ ವಿರುದ್ಧ ದಿಕ್ಕಾರ ಕೂಗಿದರಲ್ಲದೆ ಸ್ಥಳಕ್ಕೆ ಜಿಲ್ಲಾ ಅರಣ್ಯಾಧಿಕಾರಿಯವರು ಬರಬೇಕೆಂದು ಪಟ್ಟು ಹಿಡಿದು ಕಚೇರಿ ಗೇಟ್ ಎದುರು ಕುಳಿತರು.
ಅರಣ್ಯ ಇಲಾಖೆ ನೀಡಿದ ಪರವಾನಿಗೆಯಂತೆ ಕಡಿದ ಮರಗಳನ್ನು ಸರಕಾರದ ಅಧೀನದಲ್ಲಿರುವ ಮರದ ಮಿಲ್ ಗೆ ಸಾಗಿಸಬೇಕಿತ್ತು. ಆದರೆ ಈತ ಪರವಾನಿಗೆಯ ದಿನಾಂಕದ ಒಂದು ದಿನ ಮೊದಲೇ ಅಕ್ರಮವಾಗಿ ಮರಗಳನ್ನು ಕಡಿದು ತನ್ನ ಮನೆಯಲ್ಲಿರುವ ಮಿಲ್ ನಲ್ಲಿ ದಾಸ್ತಾನು ಮಾಡಿದ್ದು ಕಾನೂನು ಬಾಹಿರವಾಗಿರುವುದರಿಂದ ಈತನ ಮೇಲೆ ಕಾನೂನಿನ್ವಯ ಎಫ್ ಐ ಆರ್ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಹಾಗೂ ಈತನ ಮರದ ವ್ಯಾಪಾರದ ಪರವಾನಿಗೆಯನ್ನು ರದ್ದುಗೊಳಿಸುವಂತೆಯು ಪ್ರತಿಭಟನಾಕಾರರು ಆಗ್ರಹಿಸಿದರು.
ಜಗ್ಗದ ಪ್ರತಿಭಟನಾಕಾರರು:
ಕೊನೆಗೂ ಪ್ರತಿಭಟನಾ ಸ್ಥಳಕ್ಕಾಗಮಿಸಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ.ಶ್ರೀಧರ್ ಅವರು ಪ್ರಕರಣದ ತನಿಖೆ ನಡೆಸುವ ಭರವಸೆಯಿತ್ತರು.ಪ್ರಕರಣ ಬೆಳಕಿಗೆ ಬಂದು ಮೂರುದಿನಗಳಾದರೂ ಎಫ್ ಐ ಆರ್ ದಾಖಲಿಸದೆ ಯಾವರೀತಿ ತನಿಖೆ ನಡೆಸುತ್ತಿರಿ ಎಂದು ಪುರಸಭಾಸದಸ್ಯ ಗೋವಿಂದಪ್ರಭು,ಮಾಜಿ ಸದಸ್ಯ ದೇವದಾಸ ಶೆಟ್ಟಿ ಪ್ರಶ್ನಿಸಿದರು.ಆದರೆ ಅಧಿಕಾರಿಗಳಿಂದ ಸಮರ್ಪಕ ಉತ್ತರ ಸಿಗದಿದ್ದರಿಂದ ಆರೋಪಿತನ ಮೇಲೆ ಕೇಸ್ ದಾಖಲಿಸದೆ ಸ್ಥಳದಿಂದ ಕದಲುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದು ಕುಳಿತರು.
ಅರಣ್ಯಾಧಿಕಾರಿಗಳ ನಡೆಗೆ ಆಕ್ರೋಶ
ಪ್ರತಿಭಟನಾಕಾರರು ಪಟ್ಟುಹಿಡಿದ ಕುಳಿತ ಹಿನ್ನಲೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ.ಶ್ರೀಧರ್,ವಲಯ ಅರಣ್ಯಾಧಿಕಾರಿ ರಾಜೇಶ್ ಬಳಿಗಾರ್ ಹಾಗೂ ಇತರೆ ಸಿಬ್ಬಂದಿಗಳು ಕಚೇರಿಯೊಳಗೆ ತೆರಳಿ ಚರ್ಚೆನಡೆಸಿದರು.
ಆರ್ಧ ತಾಸು ಕಳೆದರೂ ಅರಣ್ಯಾಧಿಕಾರಿಗಳು ತಮ್ಮ ನಿಲುವು ಪ್ರಕಟಿಸದಿರುವುದರಿಂದ ಸಹನೆ ಕಳೆದುಕೊಂಡ ಪ್ರತಿಭಟನಕಾರರು ಕಚೇರಿಯೊಳಗೆ ನುಗ್ಗಲು ಯತ್ನಿಸಿದರು.ಆಗ ಬಂದೋಬಸ್ತ್ ನಲ್ಲಿದ್ದ ಬಂಟ್ವಾಳ ಪೊಲೀಸರು ತಡೆದರು.ಈ ಸಂದರ್ಭದಲ್ಲಿ ಕಚೇರಿಯೊಳಗಿಂದ ಅರಣ್ಯಾಧಿಕಾರಿಗಳು ಹೊರಾಂಗಣಕ್ಕೆ ಧಾವಿಸಿ ಬಂದರು. ಪ್ರತಿಭಟನಾಕಾರರು ಅರಣ್ಯಾಧಿಕಾರಿಗಳನ್ನು ತರಾಟೆಗೂ ತೆಗೆದುಕೊಂಡರು.
ಕೇಸ್ ದಾಖಲಿಸುವ ಭರವಸೆ:
ಕೊನೆಗೂ ಪ್ರತಿಭಟನಾಕಾರರಿಗೆ ಮಣಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ.ಶ್ರೀಧರ್,ವಲಯ ಅರಣ್ಯಾಧಿಕಾರಿ ರಾಜೇಶ್ ಬಳಿಗಾರ್ ಶನಿವಾರ ಬೆಳಗ್ಗೆಯ ಒಳಗಾಗಿ ಆರೋಪಿಯ ವಿರುದ್ದ ಎಫ್ ಐ ಆರ್ ದಾಖಲಿಸುವ ಭರವಸೆ ನೀಡಿದರಲ್ಲದೆ ಆರೋಪಿ ಕಡಿದು ಸಾಗಿಸಿರುವ ಮರವನ್ನು ಅತನ ಸ್ವಂತ ಮಿಲ್ ನಲ್ಲಿ ದಾಸ್ತಾನಿಟ್ಟಿರುವುದನ್ನು ಪರಿಶೀಲಿಸಲು ಸ್ಥಳಕ್ಕು ಭೇಟಿ ನೀಡುವುದಾಗಿ ಅರಣ್ಯಾಧಿಕಾರಿಗಳು ಮಾತುಕೊಟ್ಟ ಹಿನ್ನಲೆಯಲ್ಲಿ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.
ಬಿಜೆಪಿ ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ದೇವಪ್ಪ ಪೂಜಾರಿ,ಯುವ ಮೋರ್ಚಾ ಅಧ್ಯಕ್ಷ ಕಿಶೋರ್ ಪಲ್ಲಿಪಾಡಿ, ಜಿಲ್ಲಾ ಯುವ ಮೋರ್ಚಾ ಪ್ರ.ಕಾರ್ಯದರ್ಶ ಸುದರ್ಶನ್ ಬಜ ಅವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ಪಕ್ಷದ ಪ್ರಮುಖರಾದ ಪ್ರಕಾಶ್ ಅಂಚನ್,ಡೊಂಬಯ ಅರಳ,ಸುರೇಶ್ ಕೋಟ್ಯಾನ್,ಹರಿಪ್ರಸಾದ್ ಭಂಡಾರಿಬೆಟ್ಟು,ಪುರುಷೊತ್ತಮ ಶೆಟ್ಟಿ ವಾಮದಪದವು,ಗಣೇಶ್ ರೈ ಮಾಣಿ,ರಮಾನಾಥ ರಾಯಿ,ಸಂತೋಷ್ ಕುಮಾರ್ ರಾಯಿಬೆಟ್ಟು, ಆನಂದ ಎ.ಶಂಭೂರು,ಉಮೇಶ್ ಅರಳ,ಪ್ರಶಾಂತ್ ಕೆಂಪುಗುಡ್ಡೆ,ಪ್ರದೀಪ್ ಅಜ್ಜಿಬೆಟ್ಟು,ಚಿದಾನಂದ ರೈ ಕಕ್ಯ ಸೀತಾರಾಮ ಪೂಜಾರಿ,ದಿನೇಶ್ ದಂಬೆದಾರ್,ಯಶೋಧರ ಕರ್ಬೆಟ್ಟು,ಅಶ್ವಥ್ ರಾವ್ ಬಾಳಿಕೆ,ಅನೂಪ್ ರಾಜ್ ,ಲಕ್ಷಣ್ ರಾಜ್ ಮೊದಲಾದವರಿದ್ದರು.