ಮಂಗಳೂರು, ಎ05(SS): ದಕ್ಷಿಣ ಕನ್ನಡ ಲೋಕಸಭಾ ಚುನಾವಣೆಯ ಪ್ರಚಾರ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಎ.13ರಂದು ಮಂಗಳೂರಿಗೆ ಆಗಮಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿದೆ.
ಪ್ರಧಾನಿ ನರೇಂದ್ರ ಮೋದಿ ಮಂಗಳೂರು ಭೇಟಿಯ ಹಿನ್ನೆಲೆಯಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯ ಪ್ರಭಾರಿ ಹಾಗೂ ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್ ನೇತ್ರತ್ವದಲ್ಲಿ ತುರ್ತು ಸಭೆ ನಡೆದಿದೆ.
ಈ ವೇಳೆ ಮಾತನಾಡಿದ ವಿ. ಸುನೀಲ್ ಕುಮಾರ್, ಮೋದಿ ಆಗಮನ ಕಾರ್ಯಕ್ರಮದ ವ್ಯವಸ್ಥೆಯನ್ನು ನೋಡಿಕೊಳ್ಳಲು ಪ್ರತ್ಯೇಕ ಸಮಿತಿ ರಚಿಸಲಾಗಿದೆ. ಸುಮಾರು 2 ಲಕ್ಷಕ್ಕೂ ಮಿಕ್ಕಿ ಮೋದಿ ಅವರ ಅಭಿಮಾನಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ.
ಮಂಗಳೂರಿನ ಕೇಂದ್ರ ಮೈದಾನದಲ್ಲಿ ಎ.6ರಂದು ಬೆಳಗ್ಗೆ 8.30ಕ್ಕೆ ಚಪ್ಪರ ಮುಹೂರ್ತ ಕಾರ್ಯಕ್ರಮ ನಡೆಯಲಿದ್ದು, ಮಾಜಿ ಸಚಿವರು, ಶಾಸಕರು, ರಾಜ್ಯ ಚುನಾವಣಾ ನಿರ್ವಹಣಾ ಸಮಿತಿಯ ಸಂಚಾಲಕ ಆರ್. ಅಶೋಕ್ ಅವರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಈ ವೇಳೆ ಸಂಸದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು, ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಶಾಸಕರಾದ ಸಂಜೀವ ಮಠಂದೂರು, ಎಸ್. ಅಂಗಾರ, ಡಿ. ವೇದವ್ಯಾಸ ಕಾಮತ್, ಉಮಾನಾಥ್ ಕೋಟ್ಯಾನ್, ಡಾ| ಭರತ್ ವೈ. ಶೆಟ್ಟಿ, ಹರೀಶ್ ಪೂಂಜಾ, ರಾಜೇಶ್ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.