ಕುಂದಾಪುರ, ಆ 3 (DaijiworldNews/SM): ಮೀನುಗಾರಿಕೆಗೆ ತೆರಳುವ ಮೀನುಗಾರರು ಕಡ್ಡಾಯವಾಗಿ ಲೈಪ್ ಜಾಕೆಟ್ ಧರಿಸಬೇಕೆಂದು ಕಡ್ಡಾಯ ಮಾಡಬೇಕು. ಜೀವರಕ್ಷಕ ಉಡುಪು ಧರಿಸದೇ ಮೀನುಗಾರಿಕೆ ಮಾಡುತ್ತಿರುವುದು ಕಂಡು ಬಂದರೆ ದಂಡ ವಿಧಿಸಬೇಕು ಎಂದು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.
ಅವರು ಕುಂದಾಪುರ ತಾಲೂಕು ಪಂಚಾಯಿತಿಯಲ್ಲಿ ನಡೆದ ಕುಂದಾಪುರ ಮತ್ತು ಬೈಂದೂರು ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಉಪ್ಪುಂದದಲ್ಲಿ ಸಂಭವಿಸಿದ ಮೀನುಗಾರಿಕಾ ದೋಣಿ ದುರಂತದಲ್ಲಿ ಇಬ್ಬರು ಮೀನುಗಾರರು ಸಾವನ್ನಪ್ಪಿದರು. ಅವರು ಲೈಪ್ ಜಾಕೆಟ್ ಧರಿಸಿದ್ದರೆ ಬದುಕುಳಿಯುವ ಸಾಧ್ಯತೆಗಳಿತ್ತು. ಮೀನುಗಾರಿಕೆಗೆ ತೆರಳುವ ಮೀನುಗಾರರು ಕಡ್ಡಾಯವಾಗಿ ಲೈಪ್ ಜಾಕೆಟ್ ಧರಿಸಲೇಬೇಕು. ಈ ಬಗ್ಗೆ ಕೂಡಲೇ ಸೂಚನೆ ನೀಡಬೇಕು ಎಂದರು.
ಇದಕ್ಕೆ ಉತ್ತರಿಸಿದ ಮೀನುಗಾರಿಕಾ ಅಧಿಕಾರಿ ಲೈಪ್ ಜಾಕೆಟ್ ಹಾಗೂ ಜೀವರಕ್ಷಕ ಪರಿಕರಗಳು ಇರದಿದ್ದರೆ ಮೀನುಗಾರಿಕೆ ಬೋಟ್ಗಳ ನೋಂದಣಿಯೇ ಆಗುವುದಿಲ್ಲ. ನೋಂದಣಿ ಸಂದರ್ಭ ಪ್ರತಿಬೋಟ್ನವರು ಇಲಾಖೆಯ ಮುಂದೆ ಹಾಜರುಪಡಿಸುತ್ತಾರೆ. ಬಳಿಕ ಅದನ್ನು ಸಮಪರ್ಕಕವಾಗಿ ಬಳಕೆ ಮಾಡುವುದಿಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಮೀನುಗಾರಿಕಾ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಮೀನುಗಾರರು ಜೀವರಕ್ಷಕಗಳನ್ನು ಪಾಲನೆ ಮಾಡುತ್ತಿದ್ದಾರೆಯೇ ಎನ್ನುವುದನ್ನು ಖಾತರಿ ಪಡಿಸಿಕೊಂಡು ಎಚ್ಚರಿಕೆ ನೀಡಬೇಕು ಎಂದರು.
ಮೀನುಗಾರಿಕಾ ಇಲಾಖೆಯಲ್ಲಿ ಉಡುಪಿ ಜಿಲ್ಲೆಗೆ ಮಂಜೂರಾದ ಹುದ್ದೆಯರು ಬೇರೆ ಜಿಲ್ಲೆಗಳಲ್ಲಿ ನಿಯೋಜನೆಯಲ್ಲಿದ್ದಾರೆ. ಮೀನುಗಾರಿಕಾ ಇಲಾಖಾ ಸಿಬ್ಬಂದಿಗಳು ಕರಾವಳಿ ಜಿಲ್ಲೆಯಲ್ಲಿಯೇ ಇರಬೇಕು. ತಕ್ಷಣ ಅಂಥಹವರ ನಿಯೋಜನೆ ರದ್ದು ಪಡಿಸಿ, ವಾಸ್ತವಕ್ಕೆ ಇಲ್ಲಿ ಹುದ್ದೆ ಭರ್ತಿ ಇದ್ದು ಸಿಬ್ಬಂದಿಗಳು ನಿಯೋಜನೆ ಹೆಸರಲ್ಲಿ ಬೇರೆ ಕಡೆ ಇರುವುದು ಸರಿಯಲ್ಲ ಎಂದು ಶಾಸಕ ಕಿರಣ್ ಕೊಡ್ಗಿ ಹೇಳಿದರು.
ನದಿಯಲ್ಲಿ ಮಾಡುವ ಪಂಜರ ಮೀನು ಕೃಷಿಗೆ ಈಗ ಪರವಾನಿಗೆ ಸಿಗುತ್ತಿಲ್ಲ. ಪಂಜರ ಮೀನುಗಳಿಗೆ ಮೀನಿನ ತ್ಯಾಜ್ಯಗಳ ಬಳಕೆ ಮಾಡುತ್ತಿರುವುದು ಪರಿಸರ, ಜೀವಸಂಕುಲದ ಮೇಲೆ ಕೆಟ್ಟ ಪರಿಣಾಮ ಬೀರುವುದರಿಂದ ಈಗ ಅನುಮತಿ ನೀಡಲಾಗುತ್ತಿಲ್ಲ. ಚೆನ್ನೈಯಲ್ಲಿರುವ ಅನುಮತಿ ಪಡೆಯಬೇಕಾಗುತ್ತದೆ ಎಂದು ಮೀನುಗಾರಿಕಾ ಅಧಿಕಾರಿಗಳು ತಿಳಿಸಿದರು.