ಮಂಗಳೂರು, ಎ05(SS): ಕಾಂಗ್ರೆಸ್ ತಮ್ಮ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಿಕೊಳ್ಳುತ್ತಿರುವ ರಾಹುಲ್ ಗಾಂಧಿಗಿಂತ ನಳಿನ್ ಕುಮಾರ್ ಕಟೀಲು ಅವರ ಸಾಧನೆ ಸಾವಿರ ಪಾಲು ಮೇಲು ಎಂದು ಶಾಸಕ ವೇದವ್ಯಾಸ ಕಾಮತ್ ಅಭಿಪ್ರಾಯಪಟ್ಟಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಭಿವೃದ್ಧಿಯಲ್ಲಿ ಅತ್ಯಂತ ಹಿಂದುಳಿದಿರುವ ಕ್ಷೇತ್ರವೆಂದರೆ ಅಂದು ಅಮೇಠಿ. ಅಭಿವೃದ್ಧಿಯಲ್ಲಿ ಅತ್ಯಂತ ಕಳಪೆ ಸಾಧನೆ ಮಾಡಿರುವ ಅಮೇಠಿ ಕ್ಷೇತ್ರವನ್ನು ನೋಡಿದರೆ ರಾಹುಲ್ ಯಾವ ರೀತಿ ಕೆಲಸ ಮಾಡಿದ್ದಾರೆ ಎಂದು ಜನರಿಗೆ ತಿಳಿಯುತ್ತದೆ. ಅಮೇಠಿ ಕ್ಷೇತ್ರದ ಜನರಿಗೆ ಮೂಲ ಸೌಕರ್ಯಗಳಿಲ್ಲ. ಹೀಗಾಗಿ ರಾಹುಲ್ ಗಾಂಧಿಗಿಂತ ನಳಿನ್ ಕುಮಾರ್ ಕಟೀಲು ಅವರ ಸಾಧನೆ ಸಾವಿರ ಪಾಲು ಮೇಲು ಎಂದು ಹೇಳಿದ್ದಾರೆ.
ನಳಿನ್ ಕುಮಾರ್ ಕಟೀಲು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ 16,520 ಕೋ.ರೂ. ಅನುದಾನವನ್ನು ತಂದು ದೇಶದ ಗಮನ ಸೆಳೆದಿದ್ದಾರೆ. ಇವೆಲ್ಲ ದಾಖಲೆಯಲ್ಲಿದ್ದು ನಳಿನ್ ಓರ್ವ ಕ್ರಿಯಾಶೀಲ ಸಂಸದ ಎಂಬುದಕ್ಕೆ ನಿದರ್ಶನವಾಗಿದೆ ಎಂದು ತಿಳಿಸಿದರು.
ಲೋಕಸಭೆಯಲ್ಲಿ ನಳಿನ್ ಕುಮಾರ್ ಕಟೀಲು ಅವರ ಹಾಜರಾತಿ ಶೇ.92. ಅವರು 45 ಚರ್ಚೆಗಳಲ್ಲಿ ಭಾಗವಹಿಸಿದ್ದಾರೆ. 687 ಪ್ರಶ್ನೆಗಳನ್ನು ಕೇಳಿದ್ದಾರೆ. ಆದರೆ ಸಂಸದನಾಗಿ 350ನೇ ಸ್ಥಾನ ಪಡೆದಿರುವ ರಾಹುಲ್ ತಮ್ಮ ಕ್ಷೇತ್ರಕ್ಕೆ ತಂದಿರುವುದು ಕೇವಲ 350 ಕೋಟಿ ರೂ ಅನುದಾನ ಎಂದು ದಾಖಲೆ ತಿಳಿಸುತ್ತದೆ. ಲೋಕಸಭೆಯಲ್ಲಿ ರಾಹುಲ್ ಹಾಜರಾತಿ ಶೇ. 52, ಚರ್ಚೆಯಲ್ಲಿ ಭಾಗವಹಿಸಿರುವುದು 14, ಪ್ರಶ್ನೆ ಕೇಳಿರುವುದು ಶೂನ್ಯ ಎಂದು ಟೀಕಿಸಿದರು.
ಕರಾವಳಿಯ ಜನರು ಮನೆ ಬಾಗಿಲಿಗೆ ನಮೋ ಮನೆ -ನಮ್ಮ ಮನೆ ಎಂಬ ಸ್ಟಿಕ್ಕರ್ಗಳನ್ನು ಹಾಕಿದ್ದರು. ಆದರೆ ಕಾಂಗ್ರೆಸ್ ದೂರು ನೀಡಿ ತೆಗೆಸುವ ಕೆಲಸ ಮಾಡಿದ್ದು, ಇದು ಹತಾಶೆಯ ಪರಮಾವಧಿ. ವಾಹನಗಳಲ್ಲಿ ಅಳವಡಿಸಿರುವ ಮೈಭೀ ಚೌಕಿದಾರ್ ಸ್ಟಿಕ್ಕರನ್ನು ಕೂಡ ದೂರು ನೀಡಿ ತೆಗೆಸುವ ಕೆಲಸ ಮಾಡುತ್ತಿದ್ದು, ಇದು ಕಾಂಗ್ರೆಸ್ ಸೋಲೊಪ್ಪಿಕೊಂಡಿರುವುದನ್ನು ಸೂಚಿಸುತ್ತದೆ ಎಂದು ವ್ಯಂಗ್ಯವಾಡಿದರು.
ಮಂಗಳೂರಿನಲ್ಲಿ ಬಾರ್, ವೈನ್ಶಾಪ್ ವ್ಯವಹಾರ ನಡೆಸುತ್ತಿರುವ ವ್ಯಕ್ತಿಯೊಬ್ಬರಿಗೆ ಸೇರಿದ ಬೆಂದೂರ್ವೆಲ್ನ ಕಟ್ಟಡದಲ್ಲಿ ಕಾಂಗ್ರೆಸ್ ತನ್ನ ಚುನಾವಣಾ ಕಚೇರಿಯನ್ನು ಆರಂಭಿಸುವ ಮೂಲಕ ಮತ್ತೂಮ್ಮೆ ತನ್ನ ನೈಜ ಸಂಸ್ಕೃತಿಯನ್ನು ಜನರ ಮುಂದೆ ಪ್ರದರ್ಶಿಸಿದೆ ಎಂದು ಇದೇ ವೇಳೆ ಶಾಸಕರು ಟೀಕಿಸಿದ್ದಾರೆ.